ADVERTISEMENT

ಅಧಿಕಾರಿಗಳಿಗೆ ಜಿ.ಪಂ ಸಿಇಒ ತರಾಟೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:05 IST
Last Updated 28 ಮೇ 2017, 6:05 IST

ಕೋಲಾರ: ಜಿಲ್ಲಾ ಪಂಚಾಯಿತಿ ಅನುದಾನ ಬಳಕೆ ಸಂಬಂಧ ಮಾಹಿತಿ ಸಂಗ್ರಹಿಸದೆ ಮತ್ತು ಪೂರ್ವಸಿದ್ಧತೆ ಮಾಡಿಕೊಳ್ಳದೆ ಸಭೆಗೆ ಬಂದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ. ಕಾವೇರಿ, ಮೂರು ದಿನಗಳಲ್ಲಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ನಗರದಲ್ಲಿ ಶನಿವಾರ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಇಒ, ‘ಸಭೆಯ ಸಂಬಂಧ ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೂ ಇಲಾಖೆಯ ಆಗುಹೋಗುಗಳ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದೀರಿ. ಇದು ಬೇಜವಾಬ್ದಾರಿಯ ಪರಮಾವಧಿ’ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಮೇ 31ರೊಳಗೆ ಎಲ್ಲಾ ಇಲಾಖೆಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೀಗಾಗಿ ಮೂರು ದಿನದೊಳಗೆ ಸಮಗ್ರ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯಗಳ ನಿರ್ಮಾಣ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಯಾವ ಅಧಿಕಾರಿಯೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಅಧಿಕಾರಿಗಳು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಹುಪಾಲು ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಸಭೆಗೆ ಗೈರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮಾಹಿತಿ ಬಂದಿಲ್ಲ: ‘ಜಿಲ್ಲೆಯಲ್ಲಿ ದುರಸ್ತಿ ಯಾಗಬೇಕಿರುವ ಮತ್ತು ಶೌಚಾಲಯಗಳನ್ನು ನಿರ್ಮಿಸಬೇಕಿರುವ ಸರ್ಕಾರಿ ಶಾಲೆಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.‘ಅಧಿಕಾರಿಗಳು ಶಾಲೆಗಳಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು ಎಂದು ತಿಳಿಸಲಾಗಿತ್ತು. ಆದರೆ, ಮಾಲೂರು ಹೊರತುಪಡಿಸಿ ಇತರೆ ತಾಲ್ಲೂಕುಗಳಿಂದ ಮಾಹಿತಿ ಬಂದಿಲ್ಲ’ ಎಂದು ಹೇಳಿದರು.

‘ಶಾಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕಿಸಿದರೆ ಮಾತ್ರ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಾಧ್ಯ. ಆದರೂ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಲು ಅವಕಾಶವಿದೆ.

ಕಾಂಪೌಂಡ್‌ ಕಾಮಗಾರಿ ಹೊರತುಪಡಿಸಿ ಇತರೆ ಕೆಲಸಗಳನ್ನು ಮಾತ್ರ ಪಟ್ಟಿಯಲ್ಲಿ ನೀಡಿ. ಜತೆಗೆ ಮಕ್ಕಳ ವಿಶೇಷ ದಾಖಲಾತಿ ಆರಂಭಕ್ಕೆ ಒತ್ತು ನೀಡಿ’ ಎಂದು ಸೂಚಿಸಿದರು.
ಕೆಂಡಾಮಂಡಲ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಂಬಂಧ ಸೂಕ್ತ ಮಾಹಿತಿ ನೀಡದ ಇಲಾಖೆಯ ಉಪನಿರ್ದೇಶಕ ಡಾ.ಚನ್ನಕೇಶವಯ್ಯ ಅವರು, ‘ಸಮಸ್ಯೆಗಳನ್ನು ಪಟ್ಟಿ ಮಾಡಲು ಜನಪ್ರತಿನಿಧಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ಇದ್ದಾರೆ.  ಹೀಗಾಗಿ ಕೆಲಸಗಳಿಗೆ ಅಡ್ಡಿಯಾಗಿದೆ’ ಎಂದು ಹೇಳಿದರು.

ಇದರಿಂದ ಕೆಂಡಾಮಂಡಲರಾದ ಸಿಇಒ, ‘ಇಲಾಖೆಯ ಮಾಹಿತಿ ನೀಡುವುದು ನಿಮ್ಮ ಜವಾಬ್ದಾರಿ. ಜನಪ್ರತಿನಿಧಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ. ನಾನು ಅವರನ್ನು ಸಂಪರ್ಕಿಸಬೇಕೇ. ನಿಮ್ಮ ಕೆಲಸವನ್ನು ಮೊದಲು ಸರಿಯಾಗಿ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಸಭೆಗೆ ಯಾವುದೇ ಮಾಹಿತಿ ನೀಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್‌ ವಿರುದ್ಧ ಸಿಡಿಮಿಡಿಗೊಂಡ ಸಿಇಒ, ‘ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿಕೊಂಡು ಸಭೆಗೆ ಬರುವಂತೆ ಸೂಚಿಸಿದ್ದರೂ ಬರಿಗೈಯಲ್ಲಿ ಬಂದಿದ್ದೀರಿ. ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೇ’ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಯೋಜನಾಧಿಕಾರಿ ಮುನಿಯಪ್ಪ, ಲೆಕ್ಕಾಧಿಕಾರಿ ಶಿವಪ್ರಸಾದ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.