ADVERTISEMENT

ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ

ಸೂಚನೆ ನೀಡದೇ ರೈತರ ಬ್ಯಾಂಕ್‌ ಖಾತೆಯಿಂದ ಕೃಷಿ ಸಾಲ ಕಡಿತ ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 6:09 IST
Last Updated 4 ಫೆಬ್ರುವರಿ 2017, 6:09 IST
ಕೃಷಿ ಸಾಲವನ್ನು ರೈತರ ಬ್ಯಾಂಕ್‌ ಖಾತೆಯಿಂದ ಕಡಿತಗೊಳ್ಳಿಸುತ್ತಿರುವ ಬ್ಯಾಂಕ್‌ ಅಧಿಕಾರಿಗಳ ಕ್ರಮವನ್ನು ಖಂಡಿಸಿ ರೈತ ಸಂಘದ ಸದಸ್ಯರು ಕೋಲಾರ ಜಿಲ್ಲೆಯ ಬಡಮಾಕನಹಳ್ಳಿ ಪ್ರಗತಿ ಗ್ರಾಮೀಣ ಕೃಷ್ಣ ಬ್ಯಾಂಕ್‌ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು
ಕೃಷಿ ಸಾಲವನ್ನು ರೈತರ ಬ್ಯಾಂಕ್‌ ಖಾತೆಯಿಂದ ಕಡಿತಗೊಳ್ಳಿಸುತ್ತಿರುವ ಬ್ಯಾಂಕ್‌ ಅಧಿಕಾರಿಗಳ ಕ್ರಮವನ್ನು ಖಂಡಿಸಿ ರೈತ ಸಂಘದ ಸದಸ್ಯರು ಕೋಲಾರ ಜಿಲ್ಲೆಯ ಬಡಮಾಕನಹಳ್ಳಿ ಪ್ರಗತಿ ಗ್ರಾಮೀಣ ಕೃಷ್ಣ ಬ್ಯಾಂಕ್‌ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು   
ಕೋಲಾರ: ಕೃಷಿ ಸಾಲವನ್ನು ರೈತರ ಬ್ಯಾಂಕ್‌ ಖಾತೆಯಿಂದ ಕಡಿತಮಾಡಿಕೊಳ್ಳುತ್ತಿರುವ ಬ್ಯಾಂಕ್‌ ಅಧಿಕಾರಿಗಳ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಡಮಾಕನಹಳ್ಳಿ ಪ್ರಗತಿ ಗ್ರಾಮೀಣ ಕೃಷ್ಣ ಬ್ಯಾಂಕ್ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಹಾಲಿನ ಬಿಲ್, ಸರ್ಕಾರದಿಂದ ರೈತನ ಖಾತೆಗೆ ಬರುವ ಹಣವನ್ನು ಬ್ಯಾಂಕ್‌ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಕಡಿತಗೊಳ್ಳಿಸುತ್ತಿದ್ದಾರೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.
 
ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ತೀವ್ರ ಬರಪರಿಸ್ಥಿತಿ ಎದುರಾಗಿದ್ದು ಕೃಷಿ, ತೋಟಗಾರಿಕಾ ಚಟುವಟಿಕೆಗಳಿಂದ ದೂರು ಸರಿದು ಹೈನೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಕೇಂದ್ರ ಸರ್ಕಾರ ಗರಿಷ್ಠ ಮುಖ ಬೆಲೆಯ ನೋಟು ರದ್ದುಪಡಿಸಿದ ಕಾರಣ ಹಾಲಿನ ಒಕ್ಕೂಟಗಳು ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತಿದೆ ಎಂದು ತಿಳಿಸಿದರು.
 
ಈ ಹಿಂದೆ ರೈತರು ಬ್ಯಾಂಕಿನಿಂದ ಸಾಲ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಹಾನಿಯಾಗಿದ್ದು, ಬ್ಯಾಂಕ್‌ ಸಾಲ ತೀರಿಸಲಾಗದೆ ಬೇಸತ್ತು ಹೋಗಿದ್ದಾರೆ. ಯಾಗಾದ್ರು ಆಗಲಿ ಸಾಲ ತೀರಿಸಬೇಕು ಎಂಬ ಗುರಿಯನ್ನು ಇಟ್ಟಿಕೊಂಡು ರೈತರು ಹೈನೋದ್ಯಮ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿ ತಿಂಗಳಿಗೆ ಇಂತಿಷ್ಟು ಹಣವನ್ನು ಬ್ಯಾಂಕ್‌ಗಳಿಗೆ ಕಟ್ಟುತ್ತಿದ್ದಾರೆ. ಆದರೂ ಸಹ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಬ್ಯಾಂಕ್‌ ಅಧಿಕಾರಿಗಳು ರೈತರ ಖಾತೆಯಿಂದ ಉದ್ದೇಶ ಪೂರ್ವಕವಾಗಿಯೇ ಕಡಿತಗೊಳ್ಳಿಸುತ್ತಿದ್ದಾರೆ ಎಂದು ದೂರಿದರು.
 
ಸರ್ಕಾರದಿಂದ ರೈತರಿಗೆ ಬರುವ ಹಣವನ್ನು ಸಾಲಕ್ಕೆ ಜಮಾ ಹಾಕಿಕೊಳ್ಳಬಾರದೆಂಬ ಆದೇಶವನ್ನು ಸರ್ಕಾರದ ಆದೇಶವಿದ್ದರೂ ಆದೇಶವನ್ನು ಮೂಲೆ ಗುಂಪು ಮಾಡಿ ರೈತರ ಹಣವನ್ನು ಖಡಿತಗೊಳಿಸುವುದಲ್ಲದೆ ರೈತರ ಸಾಲದ ಹಣಕ್ಕೆ ನೋಟಿಸನ್ನು ನೀಡಿ ವಾರದೊಳಗೆ ಹಣ ಪಾವತಿಸದೇ ಹೋದರೆ ಠೇವಣಿ ಇಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. 
 
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ರಾಮುಶಿವಣ್ಣ, ಶಿವಾರೆಡ್ಡಿ, ಪುರುಷೋತ್ತಮ್, ಮಂಜು ನಾಥ್, ಬಡಮಾಕನಹಳ್ಳಿ ಗ್ರಾಮಸ್ಥರಾದ ಶಿವಕುಮಾರ್, ದೇವಣ್ಣ, ನಾರಾಯಣಸ್ವಾಮಿ, ಗಂಗಪ್ಪ, ನಾರಾ ಯಣಸ್ವಾಮಿ, ವೆಂಕಟೇಶ್, ಚಲಪತಿ, ನಾರಾಯಣಮ್ಮ, ಲಕ್ಷ್ಮಮ್ಮ, ವಿಮಲಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.