ADVERTISEMENT

ಅನುದಾನ ಬಳಕೆ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:50 IST
Last Updated 16 ಜುಲೈ 2017, 5:50 IST

ಕೋಲಾರ: ‘ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ₹ 150 ಕೋಟಿ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಳಕೆ ಮಾಡುತ್ತಿಲ್ಲ’ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್‌ ಅವರು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಮತ್ತು ಆತ್ಮ ಯೋಜನೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಜತೆ ಶನಿವಾರ ವಿಡಿಯೊ ಸಂವಾದ ನಡೆಸಿದ ಅವರು, ಇಲಾಖೆಯ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು.

‘ಫಲಾನುಭವಿಗಳಿಗೆ ಸಕಾಲಕ್ಕೆ ಸಹಾಯಧನ ನೀಡದೆ ಬಾಕಿ ಉಳಿಸಿಕೊಂಡಿದ್ದೀರಿ. ಫಲಾನುಭವಿಗಳು ಸಹಾಯಧನ ಬಂದಿಲ್ಲವೆಂದು ದೂರು ತರುತ್ತಾರೆ. ರಾಜ್ಯದಲ್ಲಿ ಈವರೆಗೆ ₹ 40 ಕೋಟಿ ಅನುದಾನ ಮಾತ್ರ ವೆಚ್ಚವಾಗಿದೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಕೃಷಿ ಬೆಳೆಗಳ ಕುರಿತು ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ರೈತರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ಕಳುಹಿಸುವ ಯೋಜನೆ ಕುರಿತು ವಿವರಣೆ ನೀಡಿದ ಅವರು, ‘ತೋಟಗಾ ರಿಕಾ ಬೆಳೆಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯಾಕೆ ಗಮನಿಸುತ್ತಿಲ್ಲ: ‘ಅವಧಿ ಮೀರಿದ ಕೀಟನಾಶಕಗಳನ್ನು ಮಾರು ವವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಅವಧಿ ಮೀರಿದ ಕೃಷಿ ಪರಿಕರಗಳ ದಾಸ್ತಾನು ಇದ್ದರೂ ಯಾಕೆ ಗಮನಿಸುತ್ತಿಲ್ಲ. ನಿರ್ಲಕ್ಷ್ಯ ತೋರಿರುವ ನಿಮ್ಮ ಮೇಲೆ ಯಾರು ಕ್ರಮ ಕೈಗೊಳ್ಳ ಬೇಕು’ ಎಂದು ಕೆಂಡಾಮಂಡಲರಾದರು.

‘ಕೃಷಿ ಪರಿಕರಗಳು ಅವಧಿ ಮೀರದಂತೆ ಎಚ್ಚರ ವಹಿಸಿ. ಸರ್ಕಾರದ ಸವಲತ್ತುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಹಾಳು ಮಾಡುವ ಬದಲು ಸಕಾಲಕ್ಕೆ ರೈತರಿಗೆ ತಲುಪಿಸಿ. ಮುಂಗಾರಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಉಂಟಾಗದಂತೆ ಕ್ರಮವಹಿಸಿ. ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಸ್ಪಂದಿಸಿ ರೈತರಿಗೆ ಬೀಜ, ಗೊಬ್ಬರ ವಿತರಿಸಿ. ಜಮೀನಿನ ಮಣ್ಣು ಆರೋಗ್ಯ ಪರೀಕ್ಷೆ ಕಾರ್ಯ ಚುರುಕುಗೊಳಿಸಿ’ ಎಂದು ತಿಳಿಸಿದರು.

‘ರೈತರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸುವಂತೆ ಒಂದೂವರೆ ವರ್ಷದಿಂದ ಹೇಳುತ್ತಿದ್ದರೂ ಆ ಕೆಲಸ ಮಾಡಿಲ್ಲ. ಕಿಸಾನ್ ಯೋಜನೆಯಡಿ ಸಂಗ್ರಹಿಸಿದ್ದ ರೈತರ ಮೊಬೈಲ್ ಸಂಖ್ಯೆಗಳ ಮಾಹಿತಿಯನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಟ್ಟರೂ ಗ್ರೂಪ್‌ಗೆ ಸೇರಿಸುವ ಕೆಲಸ ಆಗಿಲ್ಲ. ಈ ಬಗ್ಗೆ ಕೃಷಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಈ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

ಅಂಕಿ ಅಂಶ
₹150ಕೋಟಿ  ಬಿಡುಗಡೆಯಾಗಿರುವ ಅನುದಾನ

₹40ಕೋಟಿ ಬಳಕೆಯಾಗಿರುವ ಅನುದಾನ

* * 

ಕೆಲ ತಾಲ್ಲೂಕುಗಳಲ್ಲಿ ಹಿಂದಿನ ವರ್ಷ ಕೃಷಿ ಹೊಂಡ ನಿರ್ಮಿಸಿ ರುವ ರೈತರಿಗೆ ಡೀಸೆಲ್ ಪಂಪ್‌ಸೆಟ್‌ ವಿತರಿಸದ ಬಗ್ಗೆ ದೂರು ಬಂದಿವೆ. ಪರಿಕರ ಸಕಾಲಕ್ಕೆ ತಲುಪಿಸದಿದ್ದರೆ ಕ್ರಮ ಜರುಗಿಸಲಾಗುತ್ತದೆ.
ಬಿ.ವೈ.ಶ್ರೀನಿವಾಸ್‌, ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.