ADVERTISEMENT

ಅಪಘಾತ: ವಿದ್ಯಾರ್ಥಿನಿ ಸೇರಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:04 IST
Last Updated 16 ಮೇ 2017, 5:04 IST
ಕೋಲಾರ ತಾಲ್ಲೂಕಿನ ನರಸಾಪುರ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಅಪಘಾತ ಸಂಭವಿಸಿದ ಸ್ಥಳದಲ್ಲಿ ಜನ ಜಮಾಯಿಸಿದ್ದರು
ಕೋಲಾರ ತಾಲ್ಲೂಕಿನ ನರಸಾಪುರ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಅಪಘಾತ ಸಂಭವಿಸಿದ ಸ್ಥಳದಲ್ಲಿ ಜನ ಜಮಾಯಿಸಿದ್ದರು   

ಕೋಲಾರ: ತಾಲ್ಲೂಕಿನ ನರಸಾಪುರ ಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿ  75ರಲ್ಲಿ ಸೋಮವಾರ ಬೈಕ್‌ ಮತ್ತು ಸರಕು ಸಾಗಣೆ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವಾನಿಗಾನಹಳ್ಳಿಯ ಶ್ರೀನಿವಾಸ್‌ (25) ಮತ್ತು ಭಂಡಾರಹಳ್ಳಿಯ ಅಕ್ಷತಾ (22) ಮೃತಪಟ್ಟವರು. ಶ್ರೀನಿವಾಸ್‌, ಮುಳಬಾಗಿಲು ಪಟ್ಟಣದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ದಿನಗೂಲಿ ನೌಕರರಾಗಿದ್ದರು. ಅಕ್ಷತಾ, ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ಓದುತ್ತಿದ್ದರು.

ಸ್ನೇಹಿತರಾಗಿದ್ದ ಇವರು ಬೈಕ್‌ನಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕಂಪೆನಿಗೆ ಹೋಗಿ ಊರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸರಕು ಸಾಗಣೆ ವಾಹನ ಇವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಶ್ರೀನಿವಾಸ್‌ ಮತ್ತು ಅಕ್ಷತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಪಘಾತದ ಬಳಿಕ ಸರಕು ಸಾಗಣೆ ವಾಹನದ ಚಾಲಕ ನರಸಾಪುರದ ಬಳಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವೇಮಗಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೈನಿಕ ಆತ್ಮಹತ್ಯೆ
ತಾಲ್ಲೂಕಿನ ಗಟ್ಟಹಳ್ಳಿ ಗ್ರಾಮದಲ್ಲಿ ರಾಮಮೂರ್ತಿ (30) ಎಂಬ ಸೈನಿಕ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಅವರು ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದರು. ಗಟ್ಟಹಳ್ಳಿಯ ಗೀತಾ ಎಂಬುವರನ್ನು ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಹರ್ಷಿತಾ ಎಂಬ ಹೆಣ್ಣು ಮಗುವಿದೆ.

20 ದಿನಗಳ ರಜೆಯ ಮೇಲೆ ಊರಿಗೆ ಬಂದಿದ್ದ ರಾಮಮೂರ್ತಿ ಪತ್ನಿಯ ತವರು ಮನೆಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ಪಾನಮತ್ತರಾಗಿ ಮನೆಗೆ ಬಂದಿದ್ದ ಅವರ ಜತೆ ಗೀತಾ ಜಗಳವಾಡಿದ್ದರು. ಇದರಿಂದ ಬೇಸರಗೊಂಡ ರಾಮಮೂರ್ತಿ ಕುಟುಂಬ ಸದಸ್ಯರೆಲ್ಲಾ ನಿದ್ದೆ ಮಾಡುತ್ತಿದ್ದಾಗ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.