ADVERTISEMENT

ಅವಕಾಶ ಸದುಪಯೋಗಪಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 4:57 IST
Last Updated 16 ಏಪ್ರಿಲ್ 2017, 4:57 IST

ಕೋಲಾರ: ‘ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೆಲಸ ಮಾಡಿ’ ಎಂದು ಶಾಸಕ ವರ್ತೂರು ಆರ್.ಪ್ರಕಾಶ್‌ ಸಲಹೆ ನೀಡಿದರು. ನಗರದ ಟಿ.ಚನ್ನಯ ರಂಗಮಂದಿರದಲ್ಲಿ ಉದ್ಯೋಗ ಮೇಳದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾರ್ಖಾನೆಗಳ ಮಾಲೀಕರು ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ಕೊಡಬೇಡಿ, ಅವರು ನಿಮ್ಮನ್ನು ಹಾಳು ಮಾಡುತ್ತಾರೆ’ ಆರೋಪಿಸಿದರು.

‘ಹಣ ತೆಗೆದುಕೊಂಡು ಕೆಲಸ ಕೊಡಿಸಲು ಕಾರ್ಮಿಕ ಸಂಘಟನೆಗಳು ಮುಂದೆ ಬರುತ್ತವೆ. ನಿಮಗೆ ಕೆಲಸ ಸಿಕ್ಕಿದ ಮೇಲೆ ಅವರು ನಿಮ್ಮನ್ನು ಬಿಡುವುದಿಲ್ಲ. ನಿಮಗೆ ಸಂಬಳ ಹೆಚ್ಚಿಸುತ್ತೇವೆ. ಪಿ.ಎಫ್ ಜಾಸ್ತಿ ಮಾಡಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಾರೆ. ಅಂತಹ ವ್ಯಕ್ತಿಗಳ ಮಾತಿಗೆ ಯಾರು ಕಿವಿಗೋಡಬೇಡಿ’ ಎಂದು ಕಿವಿಮಾತು ಹೇಳಿದರು.

‘ನಿರುದ್ಯೋಗಿಗಳು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ತಾಲ್ಲೂಕಿಗೆ ಈಗಾಗಲೇ ಸಾಕಷ್ಟು ಕಂಪೆನಿಗಳು ಬಂದಿವೆ. ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.  ಯಾರು ಸಹ ಮಧ್ಯವರ್ತಿಗಳ ಮೂಲಕ ಕೆಲಸ ಹುಡುಕಲು ಹೋಗಬಾರದು’ ಎಂದು ಹೇಳಿದರು.

ADVERTISEMENT

‘ನೀರಿನ ಸಮಸ್ಯೆಯಿಂದ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಗೆ ಕಾರ್ಖಾನೆಗಳ ಅವಶ್ಯಕತೆ ಇದೆ. 13 ವರ್ಷಗಳಿಂದಲೂ ಜಿಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ಹೋಗಿದೆ. ರೈತರ ಮಕ್ಕಳಿಗೆ ಕಾರ್ಖಾನೆ ಉದ್ಯೋಗಗಳೇ ಬದುಕಲು ಆಸರೆಯಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಯಲ್ಲಿ ಸ್ಥಾಪಿತವಾಗಿರುವ ಕಾರ್ಖಾನೆಗಳಲ್ಲಿ  ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಮೇಳವನ್ನು ಕೋಲಾರದಲ್ಲಿ ಏರ್ಪಡಿಸಲಾಗುತ್ತಿದೆ. ಸುಮಾರು 120 ಕಂಪೆನಿಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಸಾಕಷ್ಟು ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಉದ್ಯೋಗ ಮೇಳ ನಡೆಸಲು ಮೂರು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ  ಯಾರು ನಿರ್ಲಕ್ಷಿಸಬೇಡಿ. ಆಸಕ್ತಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಪಂಚಾಯಿತಿ ಕಡೆಯಿಂದ ಪ್ರತಿ ಗ್ರಾಮದಲ್ಲೂ ಮೇಳದ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಪಂಚಾಯಿತಿ ಕಚೇರಿಯಲ್ಲೂ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ಉಪನಿರ್ದೇಶಕ ಎನ್.ಸುರೇಶ್, ಸಹಾಯಕ ನಿರ್ದೇಶಕ ರವಿಚಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.