ADVERTISEMENT

ಆರ್‌ಟಿಇ ಅನುಷ್ಠಾನಗೊಳಿಸದ ಶಾಲೆಯ ಮಾನ್ಯತೆ ರದ್ದು

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:18 IST
Last Updated 18 ಮೇ 2017, 5:18 IST

ಕೋಲಾರ: ‘ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನಗೊಳಿಸದ ಮತ್ತು ಮಕ್ಕಳ ಸುರಕ್ಷತಾ ನಿಯಮಗಳನ್ನು ಪಾಲಿಸದ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ‘ಮಕ್ಕಳ ಸುರಕ್ಷತಾ ನಿಯಮ ಪಾಲನೆಯಲ್ಲಿ ವಿನಾಯತಿ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಆರ್‌ಟಿಇ ಅಡಿ ಶಾಲೆಯಲ್ಲಿ ಒದಗಿಸುವ ಸೌಲಭ್ಯಗಳಿಗೆ ಅನುಗುಣವಾಗಿ ನಿಯಮಾನುಸಾರ ಶುಲ್ಕದ ವಿವರಗಳನ್ನು 6 ಅಡಿ ಅಗಲ ಮತ್ತು 10 ಅಡಿ ಉದ್ದದ ನಾಮಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ವಂತಿಗೆ ಹಾವಳಿ ಬಗ್ಗೆ ಬರುವ ದೂರುಗಳಿಗೆ ಉತ್ತರಿಸಲು ಪಾರದರ್ಶಕತೆ ಕಾಪಾಡಿಕೊಳ್ಳಿ’ ಎಂದು ಹೇಳಿದರು.

ADVERTISEMENT

‘ವಂತಿಗೆ ಪಡೆದ ಸಂಬಂಧ ದೂರು ಬಂದಲ್ಲಿ ಸಂಬಂಧಪಟ್ಟ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಖಚಿತ. ಆರ್‌ಟಿಇ ಅಡಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಾದರೆ ದೂರು ನೀಡಬಹುದು. ಅಧಿಕಾರಿಗಳ ಮಕ್ಕಳಿಗೆ ಸೀಟು ಸಿಕ್ಕಿದ್ದರೆ ಶಿಸ್ತುಕ್ರಮ ಜರುಗಿಸುತ್ತೇನೆ. ಸಹಾಯವಾಣಿ ಮೂಲಕ ಅನಕ್ಷರಸ್ಥ ಪೋಷಕರಿಗೆ ಆರ್‌ಟಿಇ ದಾಖಲಾತಿಗೆ ಆನ್‌ಲೈನ್‌ ಪ್ರಕ್ರಿಯೆ ನಡೆಸಿ. ಶಿಕ್ಷಣ ಕಾಯ್ದೆಯ ಧ್ಯೇಯೋದ್ದೇಶ ಅನುಷ್ಠಾನ ಎಲ್ಲರ ಜವಾಬ್ದಾರಿ’ ಎಂದರು.

ನ್ಯಾಯ ಸಿಗುತ್ತಿಲ್ಲ: ‘ಹಿಂದುಳಿದ ವರ್ಗಗಳ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್‌ಟಿಇ ಸೌಲಭ್ಯದ ಮಾಹಿತಿಯೇ ಇಲ್ಲ. ಆದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಹಿತಿ ಅಭಿಯಾನ ನಡೆಸಬೇಕು. ಜಿಲ್ಲೆಯಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಸುಮಾರು 30 ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಆರ್‌ಟಿಇ ಅಡಿ ಬಡ ಮಕ್ಕಳಿಗೆ ನ್ಯಾಯ ಸಿಗುತ್ತಿಲ್ಲ. ಸಮಿತಿ ರಚಿಸಿ ಈ ಬಗ್ಗೆ ತನಿಖೆ ಮಾಡಿಸಿದರೆ ಸತ್ಯಾಂಶ ಹೊರ ಬರುತ್ತದೆ’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಸದಸ್ಯ ಶ್ರೀಕೃಷ್ಣ ಮನವಿ ಮಾಡಿದರು.

ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ನಾಗಭೂಷಣ್ ಮಾತನಾಡಿ, ‘ರಸ್ತೆ ಕಡೆಗೆ ಪ್ರವೇಶ ದ್ವಾರವಿರುವ ಹೊಸ ಶಾಲೆಗಳಿಗೆ ಮಕ್ಕಳ ಸುರಕ್ಷತಾ ನಿಯಮಗಳನ್ನು ಲೆಕ್ಕಿಸದೆ ಅನುಮತಿ ನೀಡಲಾಗಿದೆ. ನನ್ನ ಜತೆ ಬನ್ನಿ. ಅಂತಹ ಶಾಲೆಗಳನ್ನು ತೋರಿಸುತ್ತೇನೆ’ ಎಂದು ಹೇಳಿದರು.

ಮುಜುಗರವಾಗುತ್ತಿದೆ: ‘ಖಾಸಗಿ ಶಾಲಾ ಶಿಕ್ಷಕರ ಮತ್ತು ಸಿಬ್ಬಂದಿಯ ನೇಮಕಕ್ಕೆ ಪೊಲೀಸರಿಂದ ಪರಿಶೀಲನೆ ಮಾಡಿಸಬೇಕೆಂಬ ನಿಯಮದಿಂದ ಅನೇಕ ಕುಟುಂಬಗಳಿಗೆ ಮುಜುಗರವಾಗುತ್ತಿದೆ. ಪೊಲೀಸರು ಮನೆಗಳ ಬಳಿ ಹೋದಾಗ ವಿರೋಧ ವ್ಯಕ್ತವಾಗಿದೆ. ಮಣಿಪಾಲ್‌ನ ಟಿ.ಎ.ಪೈ ಎಂಬುವರ ಪ್ರಕರಣದಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಸರ್ಕಾರಕ್ಕಿಲ್ಲ. ಶಾಲೆಗಳು ಒದಗಿಸುವ ಸೌಲಭ್ಯಗಳಿಗೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಸ್ಪಷ್ಪಪಡಿಸಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಖಾಸಗಿ ಶಾಲಾ ಶಿಕ್ಷಕರಿಗೂ ಸರ್ಕಾರಿ ಶಿಕ್ಷಕರಂತೆಯೇ ವಿವಿಧ ತರಬೇತಿ ನೀಡಿ’ ಎಂದು ನಾಗಭೂಷಣ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಖಾಸಗಿ ಶಾಲಾ ಶಿಕ್ಷಕರನ್ನು ತರಬೇತಿಗೆ ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ನಿಯಮ ಪಾಲಿಸಿದ್ದೇವೆ: ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ಗೋಕುಲ ನಾರಾಯಣಸ್ವಾಮಿ ಮಾತನಾಡಿ, ‘ಆರ್‌ಟಿಇ ಅನುಷ್ಠಾನ ಮತ್ತು ಮಕ್ಕಳ ಸುರಕ್ಷತೆ ನಿಯಮಗಳನ್ನು ಪಾಲಿಸಿದ್ದೇವೆ. ವಿನಾಕಾರಣ ಖಾಸಗಿ ಶಾಲೆಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಡಿ’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ವಿ.ಕಾಂತ, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್, ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ, ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಹ್ಮಣ್ಯ, ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಜಯರಾಜ್, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ, ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.

**

ಉತ್ತಮ ಸಾಧನೆ
ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಹಿಂದೆ ಶಿಕ್ಷಕರು, ಖಾಸಗಿ ಶಾಲಾ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಪರಿಶ್ರಮವಿದೆ. ಖಾಸಗಿ ಶಾಲೆಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಆರೋಪ ಮಾಡುವ ಉದ್ದೇಶವಿಲ್ಲ. ಹಣ ಸಂಪಾದನೆಗಾಗಿಯೇ ಖಾಸಗಿ ಶಾಲೆ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಇದನ್ನು ಸರಿಪಡಿಸಲು ಶಾಲೆಗಳು ಪಾರದರ್ಶಕತೆ ಕಾಪಾಡಿಕೊಳ್ಳಬೇಕು.
–ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.