ADVERTISEMENT

ಎಲೆಕ್ಟ್ರಾನಿಕ್‌ ಸಾಧನ ಅಳವಡಿಕೆ ಯೋಚನೆ

ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 8:51 IST
Last Updated 10 ಮಾರ್ಚ್ 2017, 8:51 IST

ಕೆಜಿಎಫ್‌: ಕಾರಾಗೃಹಗಳಲ್ಲಿ ಮೊಬೈಲ್‌ ಮತ್ತಿತರ ಎಲೆಕ್ಟ್ರಾನಿಕ್‌ ಸಾಧನಗಳನ್ನು ಪತ್ತೆ ಹಚ್ಚಲು ಸಣ್ಣ ಟವರ್‌ಗಳನ್ನು ಅಳವಡಿಸಲು ಯೋಚಿಸಲಾಗುತ್ತಿದೆ ಎಂದು ಕಾರಾಗೃಹಗಳ ಪೊಲೀಸ್  ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣರಾವ್‌ ಹೇಳಿದರು. ನಗರದ ಚಾಂಪಿಯನ್‌ರೀಫ್ಸ್‌ ವಿಶೇಷ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಸಾಮಾನ್ಯವಾಗಿ ಕಾರಾಗೃಹಗಳಲ್ಲಿ ಮೊಬೈಲ್‌ ನಿಷೇಧಕ್ಕೆ ಜಾಮರ್‌ಗಳನ್ನು ಅಳವಡಿಸಲಾಗುತ್ತಿದೆ. ಜಾಮರ್‌ ಅಳವಡಿಸಿದರೆ, ಜೈಲು ಅಕ್ಕಪಕ್ಕದ ಸ್ಥಳಗಳಲ್ಲಿ ಮೊಬೈಲ್ ಸೇವೆ ಸ್ಥಗಿತಗೊಳ್ಳುತ್ತದೆ. ಮೊಬೈಲ್‌ ಕಂಪೆನಿಗಳು ತಕರಾರು ತೆಗೆಯುತ್ತಿವೆ. ಆದ್ದರಿಂದ ಐದು ಅಡಿಗಳ ಎತ್ತರ ಟವರ್‌ಗಳನ್ನು ಪ್ರವೇಶದ್ವಾರದ ಬಳಿ ಅಳವಡಿಸಲಾಗುತ್ತದೆ.

ಅದರ ಮೂಲಕ ಹಾದುಹೋದರೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪತ್ತೆ ಹಚ್ಚುತ್ತದೆ. ಇದರಿಂದಾಗಿ ದೈಹಿಕ ತಪಾಸಣೆ ಮಾಡುವುದು ತಪ್ಪುತ್ತದೆ. ಪ್ರಾಯೋಗಿಕವಾಗಿ ಐದು ಉಪಕರಣಗಳನ್ನು ಖರೀದಿ ಮಾಡಲು ಯೋಚಿಸಲಾಗಿದೆ ಎಂದರು.

ಜೈಲಿನ ಕ್ಯಾಂಟಿನ್‌ಗಳಲ್ಲಿ ಬೀಡಿ, ಸಿಗರೇಟು ಸೇರಿದಂತೆ ಎಲ್ಲಾ ತಂಬಾಕು ವಸ್ತುಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಂಬಾಕು ವಸ್ತುಗಳಿಗೆ ದಾಸರಾಗಿರುವವರಿಗೆ ಕೌನ್ಸಿಲಿಂಗ್‌ ಮಾಡುವ ಮೂಲಕ ಅವರ ಮನ ಒಲಿಸಲಾಗುವುದು ಎಂದರು.

ಜೈಲಿನಲ್ಲಿರುವ ಕೈದಿಗಳನ್ನು ನೋಡುವ ಬರುವ ಮಕ್ಕಳಿಗೆ ನೇರವಾಗಿ ಕೈದಿ ಜೊತೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಲಾಗುವುದು.  ಕೆಜಿಎಫ್‌ ಕಾರಾಗೃಹದಲ್ಲಿ ಕೈದಿಗಳು ತಮ್ಮ ಕುಟುಂಬದವರ ಜೊತೆ ಮಾತನಾಡಲು ಪ್ರತ್ಯೇಕ ಕೊಠಡಿಯನ್ನು ಶೀಘ್ರದಲ್ಲಿ ನಿರ್ಮಿಸಲಾಗುವುದು ಮತ್ತು  ಎರಡು ಬ್ಯಾರೆಕ್‌ಗಳನ್ನು ನಿರ್ಮಿಸುವುದರ ಜೊತೆಗೆ ಕಾರಾಗೃಹವನ್ನು ಉನ್ನತೀಕರಿಸಲಾಗುವುದು ಎಂದು ಹೇಳಿದರು.

ಕಾರಾಗೃಹಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರ್ಕಾರ ಹೊಸದಾಗಿ 1811 ಹುದ್ದೆಗಳನ್ನು ಮಂಜೂರು ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ತುಂಬಲಾಗುವುದು. ಪ್ರಸ್ತುತ ಹಲವು ಸಿಬ್ಬಂದಿ ತರಬೇತಿಯಲ್ಲಿ ತೊಡಗಿದ್ದಾರೆ. ಅವರು ತರಬೇತಿ ಮುಗಿದ ನಂತರ ಕೊರತೆ ಕೊಂಚ ನಿವಾರಣೆಯಾಗುತ್ತದೆ ಎಂದರು.

ಪ್ರಸ್ತುತ ರಾಜ್ಯದಲ್ಲಿರುವ 1500 ಕೈದಿಗಳ ಪೈಕಿ ಶೇ 70ರಷ್ಟು  ಮಂದಿ ವಿಚಾರಣಾಧೀನ ಕೈದಿಗಳೇ ಇದ್ದಾರೆ. ಇವರ ಸಂಖ್ಯೆಯನ್ನು ಕಡಿಮೆ ಮಾಡಲು ಶೀಘ್ರ ವಿಚಾರಣೆ ನಡೆಯುವ ಅವಶ್ಯಕತೆ ಇದೆ. ವಿಚಾರಣೆ ಶೀಘ್ರವಾಗಿ ನಡೆಯಲು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಅನುವು ಮಾಡಿಕೊಡಲಾಗುವುದು. ಈಗಾಗಲೇ 32 ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ಅನುಕೂಲವಿದೆ.

ಮುಂದಿನ ದಿನಗಳಲ್ಲಿ 40 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಡಿಜಿಪಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್‌ಕುಮಾರ್‌, ಡಿವೈಎಸ್ಪಿ ಪುಟ್ಟಮಾದಯ್ಯ, ಜೈಲರ್ ಮಂಜುನಾಥ್‌ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.