ADVERTISEMENT

ಕಾಂಗ್ರೆಸ್‌ಗೆ ದಲಿತರ ಬೆಂಬಲ ಹೇಳಿಕೆ ಸರಿಯಲ್ಲ

ದಲಿತ ಮುಖಂಡರ ಸಭೆಯಲ್ಲಿ ಮುಖಂಡ ಕೆ.ಶಿವಪ್ಪ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 6:55 IST
Last Updated 25 ಏಪ್ರಿಲ್ 2018, 6:55 IST

ಶ್ರೀನಿವಾಸಪುರ: ಈಚೆಗೆ ಪಟ್ಟಣದಲ್ಲಿ ಏರ್ಪಡಿಸಿದ್ದ ದಲಿತಪರ ಸಂಘಟನೆಗಳ ಒಕ್ಕೂಟದ ಹಾಗೂ ದಲಿತ ಸಮುದಾಯದ ಮುಖಂಡರ ಸಭೆಯಲ್ಲಿ ಹಿರಿಯ ದಲಿತ ಮುಖಂಡ ಸಿ.ಮುನಿಯಪ್ಪ ಸರ್ವಾನುಮತದಿಂದ ಕಾಂಗ್ರೆಸ್‌ಗೆ ಏಕಪಕ್ಷೀಯವಾಗಿ ಬೆಂಬಲ ಘೋಷಿಸಿರುವುದು ಖಂಡನೀಯ ಎಂದು ತಾಲ್ಲೂಕು ದಲಿತ ಮುಖಂಡ ಕೆ.ಶಿವಪ್ಪ ಹೇಳಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಲಿತ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‌ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಹಿಂದೆ ದಲಿತರ ಅಭಿವೃದ್ಧಿಗೆ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳ ಅರಿವಿಲ್ಲದೆ ಹಾಗೂ ಈ ಕ್ಷೇತ್ರಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ದಲಿತರ ಪರವಾಗಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿರುವುದು ಸರಿಯಲ್ಲ ಟೀಕಿಸಿದರು.

ಕ್ಷೇತ್ರದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ದಲಿತರೂ ಸೇರಿದಂತೆ ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಲಿತ ಕುಟುಂಬಗಳಿಗೆ ನೂರಾರು ಕೃಷಿ ಕೊಳವೆ ಬಾವಿ ಮಂಜೂರು ಮಾಡಿಸಿದ್ದರು. ವಿವಿಧ ವಸತಿ ಯೋಜನೆಗಳಡಿ ಸಾವಿರಾರು ಮನೆಗಳನ್ನು ಬಡವರಿಗೆ ಹಂಚಿದ್ದರು. ಮಿನಿ ವಿಧಾನ ಸೌಧ ಇವರ ಅಧಿಕಾರಾವಧಿಯಲ್ಲಿ ಕಟ್ಟಲ್ಪಟ್ಟಿತು. ಅದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್‌ ಉದ್ಯಾನವೂ ಇವರ ಕೊಡುಗೆಯಾಗಿದೆ ಎಂದು ಹೇಳಿದರು.

ADVERTISEMENT

ದಲಿತ ಸಮುದಾಯದ ಹೆಸರಲ್ಲಿ ಸಿ.ಮುನಿಯಪ್ಪ ಅವರು ಸೇರಿದಂತೆ ಕೆಲವು ದಲಿತ ಮುಖಂಡರು ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಏಜೆಂಟರಂತೆ ವರ್ತಿಸಿದ್ದಾರೆ. ಪರೋಕ್ಷವಾಗಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎನ್ನುವಂತೆ ಮಾತನಾಡಿದ್ದಾರೆ ಎಂದರು.

ಎತ್ತಿನ ಹೊಳೆ ಯೋಜನೆಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳಲಾಗಿದೆ. ಕಳೆದ 5ವರ್ಷಗಳಿಂದ ದಲಿತರಿಗೆ ಒಂದು ಕೊಳವೆ ಬಾವಿಯೂ ಕೊರೆಸಿಲ್ಲ. ದಲಿತರ ಬಗ್ಗೆ ಕಾಳಜಿ ಇದ್ದರೆ ಸಾಲದು, ದಲಿತರ ಆರ್ಥಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜಿ.ಕೆ.ವೆಂಕಟಶಿವಾರೆಡ್ಡಿ ದಲಿತರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರಿಗೆ ಸ್ಥಾನ ಕಲ್ಪಿಸಿದ್ದಾರೆ. ಈ ಸಂಗತಿ ದಲಿತ ಸಮುದಾಯಕ್ಕೆ ತಿಳಿಯದ ವಿಷಯವಲ್ಲ. ಬದಲಾದ ಪರಿಸ್ಥಿತಿಯಲ್ಲಿ ದಲಿತರು ಏಕಪಕ್ಷೀಯ ನಿರ್ಧಾರಗಳನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿಲ್ಲ ಎಂದರು.

ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಎಂ.ಜಿ.ಜಯಪ್ರಸಾದ್‌ ಮಾತನಾಡಿ, ಈ ಬಾರಿ ಮತದಾರ ಕೋಮುವಾದಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಸರಿಯಾದ ಬುದ್ಧಿ ಕಲಿಸಲಿದ್ದಾನೆ. ದಲಿತರು ಹಾಗೂ ರೈತರು ಒಂದಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ದಲಿತ ಮುಖಂಡರಾದ ಪೆದ್ದಪಲ್ಲಿ ನಾರಾಯಣಸ್ವಾಮಿ, ಕೊರ್ನಹಳ್ಳಿ ಆಂಜಿ, ಗಣೇಶ್‌, ರವಿ, ಸೀತಪ್ಪ, ಮಂಜುನಾಥ್, ಮುನಿಕೃಷ್ಣ, ಜಿ.ಅಜಯ್‌ ಪ್ರಸಾದ್‌, ಗೊರವಮಾಕಲಪಲ್ಲಿ ಜಿ.ಆರ್.ಶ್ರೀನಿವಾಸ್‌, ಕೆ.ನರಸಿಂಹಮೂರ್ತಿ ಇದ್ದರು.

**
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಬೆಂಬಲಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಂದು ಸಮುದಾಯದ ಹೆಸರಲ್ಲಿ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಬೆಂಬಲ ಘೋಷಿಸುವುದು ಸರಿಯಾದ ಕ್ರಮವಲ್ಲ
– ಕೆ.ಶಿವಪ್ಪ, ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.