ADVERTISEMENT

ಕೆಂಜಿರುವೆಯ ಗೂಡು ಕಟ್ಟುವ ಕೌಶಲ ಅನನ್ಯ

ಆರ್.ಚೌಡರೆಡ್ಡಿ
Published 20 ಆಗಸ್ಟ್ 2017, 9:12 IST
Last Updated 20 ಆಗಸ್ಟ್ 2017, 9:12 IST
ಶ್ರೀನಿವಾಸಪುರ ಹೊರ ವಲಯದ ಜಂಬು ನೇರಳೆ ಮರವೊಂದರ ಎಲೆಗಳಿಂದ ನಿರ್ಮಿಸಿರು ಗೂಡಿನ ಹೊರ ಭಾಗದಲ್ಲಿ ಶತ್ರುವಿನ ಮೇಲೆ ದಾಳಿ ಮಾಡಲು ಸಜ್ಜಾಗಿರುವ ಕೆಂಜಿರುವೆ ದಂಡು
ಶ್ರೀನಿವಾಸಪುರ ಹೊರ ವಲಯದ ಜಂಬು ನೇರಳೆ ಮರವೊಂದರ ಎಲೆಗಳಿಂದ ನಿರ್ಮಿಸಿರು ಗೂಡಿನ ಹೊರ ಭಾಗದಲ್ಲಿ ಶತ್ರುವಿನ ಮೇಲೆ ದಾಳಿ ಮಾಡಲು ಸಜ್ಜಾಗಿರುವ ಕೆಂಜಿರುವೆ ದಂಡು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೆಂಜಿರುವೆ ಸಾಮಾನ್ಯ. ತಿಳಿಗೆಂಪು ಬಣ್ಣದ ಈ ಇರುವೆಯನ್ನು ಸ್ಥಳೀಯವಾಗಿ ಕೋತಿರುವೆ, ಗಂಡ್ರಕೋತ್ಲು ಎಂದು ಕರೆಯುತ್ತಾರೆ. ಈ ಇರುವೆ ದಾಳಿಗೆ ಒಳಗಾಗದ ಕೃಷಿಕ ಅಪರೂಪ. ಮಾವು, ಹಲಸು, ಸಪೋಟ, ಹುಣಸೆ, ಹೊಂಗೆ ಹೀಗೆ ಯಾವುದೇ ಮರವಾದರೂ ಸರಿ ಕೆಂಜಿರುವೆ ಎಲೆಯ ಗೂಡುಕಟ್ಟಿ ವಾಸಿಸುತ್ತದೆ. ಫಸಲನ್ನು ಕೊಯ್ಯಬೇಕಾದಾಗ ಕೆಂಜಿರುವೆ ಇರುವ ಮರ ಹತ್ತಲು ಜನ ಹಿಂದೇಟು ಹಾಕುತ್ತಾರೆ.

ಮನುಷ್ಯನ ವಾಸನೆ ಸೋಕಿದರೆ ಸಾಕು ಅವು ದಾಳಿಗೆ ಒಟ್ಟಾಗಿ ಬರುತ್ತವೆ. ದೇಹ ಸಿಕ್ಕಿದ ತಕ್ಷಣ ಚರ್ಮಕ್ಕೆ ಬಾಯಿ ಹಾಕಿ ಕಚ್ಚುತ್ತವೆ. ಬಾಯಿಯ ಮುಂಭಾಗದಲ್ಲಿ ಕತ್ತರಿಯಂಥ ಅಂಗದಿಂದ ಚರ್ಮವನ್ನು ಬಲವಾಗಿ ಕಚ್ಚಿಹಿಡಿಯುತ್ತವೆ. ಒಂದೇ ಬಾರಿಗೆ ಸಾವಿರಾರು ಇರುವೆಗಳು ದಾಳಿ ನಡೆಸುವುದರಿಂದ ದಾಳಿಗೆ ಒಳಗಾದ ವ್ಯಕ್ತಿ ತತ್ತರಿಸಿಹೋಗುತ್ತಾನೆ.

ನಿಸರ್ಗದ ಮಡಿಲಲ್ಲಿ ಸುತ್ತಾಡುವವರಿಗೆ ಕೆಂಜಿರುವೆ ಗೂಡುಗಳ ದರ್ಶನವಾಗುತ್ತದೆ. ಕೆಂಜಿರುವೆ ಗೂಡು ಕಟ್ಟುವ ಕೌಶಲ ಬೆರಗುಗೊಳಿಸುತ್ತದೆ. ಈ ಚಿಕ್ಕ ಇರುವೆಗಳು ನೇರಳೆ, ಹಲಸು, ಅರಳಿ ಮುಂತಾದ ಎಲೆಗಳನ್ನು ಬಗ್ಗಿಸಿ ವ್ಯವಸ್ಥಿತವಾಗಿ ಸೇರಿಸಿ ಎಲೆಗಳು ಸೇರುವ ಕಡೆ ಅಂಟಿನಂಥ ದ್ರವ ಸ್ರವಿಸಿ ಬಿಗಿಗೊಳಿಸುತ್ತವೆ. ಹೊರಗೆ ಎಲೆಗಳನ್ನು ಸುತ್ತಿದಂತೆ ಕಂಡುಬರುವ ಗೂಡಿನ ಒಳಗೆ ಜೀವಂತ ಎಲೆಗಳಿಂದ ವಿಭಾಗಗಳನ್ನು ನಿರ್ಮಿಸಿರುತ್ತವೆ.

ADVERTISEMENT

ಸಾಮಾನ್ಯವಾಗಿ ಮೊಟ್ಟೆ ಇಡುವ ಕೋಣೆ, ಅದರ ಪಕ್ಕದಲ್ಲಿ ಆಹಾರ ದಾಸ್ತಾನು ಕೋಠಡಿ, ಒಟ್ಟಾಗಿ ವಾಸಿಸಲು ಒಂದು ಹಜಾರ ಗೂಡಿನ ಮುಖ್ಯ ವಿಭಾಗಗಳು. ಮೊಟ್ಟೆಯಿಂದ ಹೊರ ಬರುವ ಮರಿಗಳಿಗಾಗಿ ತಮಗಿಂತ ಗಾತ್ರದಲ್ಲಿ ಚಿಕ್ಕದಾದ ರೆಕ್ಕೆ ಹುಳುಗಳನ್ನು ಆಹಾರ ಕೊಠಡಿಯಲ್ಲಿ ಜೀವಂತ ಬಂಧಿಸಿರುತ್ತವೆ.

ಬೇಸಿಗೆಯಲ್ಲಿ ಈ ಇರುವೆಗಳು ಹೆಚ್ಚಾಗಿ ಹೊಂಗೆ ಮರಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಹೊಂಗೆ ಎಲೆ ಬೇರೆ ಎಲೆಗಳಿಗಿಂತ ತಂಪಾಗಿರುತ್ತದೆ. ಹಾಗಾಗಿ ಬಿಸಿಲಿನ ತಾಪದಿಂದ ಪಾರಾಗಲು ಜೀವಂತ ಹೊಂಗೆ ಎಲೆಗೂಡನ್ನು ನಿರ್ಮಿಸಿ, ಚಿಗುರೆಲೆ ಕೋಣೆಯಲ್ಲಿ ಮೊಟ್ಟೆ ಇಟ್ಟು ಬಿಸಿಲಿನ ಝಳ ತಟ್ಟದಂತೆ ನೋಡಿಕೊಳ್ಳುತ್ತವೆ. ಗೂಡಿನೊಳಗೆ ಹೋಗಿ ಬರಲು ಸುರಕ್ಷಿತ ದ್ವಾರವಿರುತ್ತದೆ. ಅನ್ಯ ಜೀವಿಗಳು ಗೂಡು ಪ್ರವೇಶಿಸದಂತೆ ಕಾವಲು ವ್ಯವಸ್ಥೆ ಇರುತ್ತದೆ. ಗೂಡಿನ ಬಳಿ ಬೆರಳಾಡಿಸಿದರೂ ಸಾಕು ಸಾವಿರಾರು ಇರುವೆಗಳು ಒಟ್ಟಾಗಿ ಬಂದು ದಾಳಿ ನಡೆಸಲು ಸಜ್ಜಾಗುತ್ತವೆ.

ಮಾವಿನ ಮರದಲ್ಲಿ ಕೆಂಜಿರುವೆ ಇದ್ದರೆ ಕಾಯಿ ಕೀಳುವವರು ಅದರ ತಂಟೆಗೆ ಹೋಗುವುದಿಲ್ಲ. ಅವು ಇರುವ ಮರಗಳಲ್ಲಿ ಸೊಪ್ಪು ಕೊಯ್ಯುವುದಿಲ್ಲ. ಕೆಂಜಿರುವೆ ಮರದ ಕೆಳಗೆ ಕುಳಿತುಕೊಳ್ಳಲೂ ಇಷ್ಟಪಡುವುದಿಲ್ಲ. ಅವೆಂದರೆ ಜನರಿಗೆ ಅಷ್ಟು ಭಯ. ಮರ ಏರುವ ಅಥವಾ ಮರದ ಮೇಲೆ ಕೂರುವ ಚಿಕ್ಕ ಪುಟ್ಟ ಇರುವೆ ಅಥವಾ ಕೀಟಗಳನ್ನು ತಿಂದು ಬದುಕುವ ಕೆಂಜಿರುವೆ ಮನುಷ್ಯನನ್ನು ಹೆದರಿಸುತ್ತದೆ.

ಒಂದು ಹೊಂಗೆ ಮರದಲ್ಲಿ ನಿರ್ಮಿಸಿರುವ ಹತ್ತಾರು ಗೂಡುಗಳನ್ನು ನೋಡಿದರೆ, ಅದೊಂದು ಕೆಂಜಿರುವೆ ಗ್ರಾಮದಂತೆ ಬಾಸವಾಗುತ್ತದೆ. ಒಂದೊಂದು ಗುಂಪಿನ ಇರುವೆಗಳು ಪ್ರತ್ಯೇಕವಾದ ಗೂಡುಗಳಲ್ಲಿ ವಾಸಿಸುತ್ತವೆ. ಆದರೆ ಆಪತ್ತು ಬಂದಾಗ ಎಲ್ಲವೂ ಗೂಡುಗಳಿಂದ ಹೊರಬಂದು ಶತ್ರುವಿನ ವಿರುದ್ಧ ಸೆಣಸುತ್ತವೆ. ರಕ್ಷಣೆ ವಿಷಯದಲ್ಲಿ ಮಾತ್ರ ರಾಜಿ ಮಾಡಿಕೊಳ್ಳುವುದಿಲ್ಲ.

ಕೆಂಜಿರುವೆ ಪ್ರೋಟೀನ್‌ಯುಕ್ತ ಜೀವಿ. ಆದ್ದರಿಂದಲೇ ಮಲೆನಾಡಿನಲ್ಲಿ ಕೆಲವರು ಹಿಡಿದು ಸಂಸ್ಕರಿಸಿ ತಿನ್ನುತ್ತಾರೆ. ಆದರೆ ಬಯಲು ಸೀಮೆಯಲ್ಲಿ ಇದನ್ನು ತಿನ್ನುವುದಿಲ್ಲ. ಹಾಗಾಗಿ ಇನ್ನೂ ಜೀವಂತವಾಗಿದೆ. ಇಲ್ಲಿ ಮಳೆಗಾಲದಲ್ಲಿ ಹುತ್ತದಿಂದ ಹೊರಬರುವ ರೆಕ್ಕೆಹುಳುಗಳನ್ನು (ಈಸುರುಳಿ) ಹಿಡಿದು ಉರಿದು ತಿನ್ನುತ್ತಾರೆ.

ತಾಲ್ಲೂಕಿನಲ್ಲಿ ಮಾವು, ಸಪೋಟ, ನೇರಳೆ ಮುಂತಾದ ಹಣ್ಣಿನ ಮರಗಳಿಗೆ ಔಷಧಿ ಸಿಂಪರಣೆ ಮಾಡಲು ಪ್ರಾರಂಭಿಸಿದ ಮೇಲೆ ಕೆಂಜಿರುವೆ ಸಾವಿನ ನೆರಳಲ್ಲಿ ವಾಸಿಸುವಂತಾಯಿತು. ಫಸಲು ರಕ್ಷಣೆಗೆ ಸಿಂಪಣೆ ಮಾಡುವ ಔಷಧಿ ಕೆಂಜಿರುವೆ ಜೀವ ತೆಗೆಯುತ್ತಿದೆ. ಈಗ ಕೆಂಜಿರುವೆ ರಕ್ಷಣಾತ್ಮಕ ಜೀವನ ನಡೆಸಲು ಪ್ರಾರಂಭಿಸಿದೆ. ಹಣ್ಣಿನ ಮರ ಬಿಟ್ಟು ಹೊಂಗೆಯಂಥ ಮರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.