ADVERTISEMENT

ಕೆಜಿಎಫ್‌: ಮೂರು ಠಾಣೆಗಳು ಅಸ್ತಿತ್ವಕ್ಕೆ

ಜಿಲ್ಲಾ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 5:43 IST
Last Updated 4 ಫೆಬ್ರುವರಿ 2017, 5:43 IST
ಕೆಜಿಎಫ್: ಸದ್ಯ ಕಾರ್ಯನಿರ್ವಹಿಸುತ್ತಿರುವ ಆಂಡರಸನ್‌ಪೇಟೆ ಮತ್ತು ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಗಳನ್ನು ಮುಚ್ಚಿ ಕ್ಯಾಸಂಬಳ್ಳಿ, ಬೂದಿಕೋಟೆ ಮತ್ತು ಬಂಗಾರಪೇಟೆ ಗ್ರಾಮಾಂತರ   ಠಾಣೆಗಳು ಆರಂಭಿಸುವ ಕುರಿತು ಸರ್ಕಾರಕ್ಕೆ ಜಿಲ್ಲಾ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವ ಪರಿಶೀಲನೆಯ ಹಂತದಲ್ಲಿದೆ.
 
ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್‌ ಸರ್ಕಾರಕ್ಕೆ ಹೊಸ ಠಾಣೆ ಆರಂಭ ಕುರಿತು ವರದಿ ಸಲ್ಲಿಸಿದ್ದರು. ವರದಿಗೆ ಪೂರಕವಾಗಿ ಕೆಲವು ಮಾಹಿತಿ ಅಗತ್ಯವಾದ ಕಾರಣ ಪೊಲೀಸ್ ಕೇಂದ್ರ ಕಚೇರಿ ವರದಿ ವಾಪಸ್ ಕಳಿಸಿದ್ದು, ಈಗ ಅದರ ಪುನರ್‌ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
 
ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ವಗ್ರಾಮ ಕ್ಯಾಸಂಬಳ್ಳಿ ಪ್ರಮುಖ ಹೋಬಳಿ ಕೇಂದ್ರವಾಗಿದೆ. ಆಂಡರಸನ್‌ ಪೇಟೆ ಪೊಲೀಸ್‌ ಠಾಣೆ ವಿಸ್ತಾರ ಅವೈಜ್ಞಾನಿಕ ವಾಗಿದೆ. ನಗರ ಪ್ರದೇಶ ಒಳಗೊಂಡಂತೆ ಆಂಧ್ರಪ್ರದೇಶದ ರಾಜಪೇಟೆ ರೋಡ್‌ ವರೆಗೂ ಚಾಚಿಕೊಂಡಿದೆ. ಆಂಧ್ರಪ್ರದೇಶ ಗಡಿ ಪ್ರದೇಶಗಳಿಗೆ ಕ್ಯಾಸಂಬಳ್ಳಿ ಹತ್ತಿರವಿದೆ. ಈ ಕಾರಣಕ್ಕೆ ಕ್ಯಾಸಂಬಳ್ಳಿಗೆ ಪೊಲೀಸ್‌ ಠಾಣೆ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಕ್ಯಾಸಂಬಳ್ಳಿ ಪೊಲೀಸ್‌ ಠಾಣೆ ಮಂಜೂರಾದರೆ, ಆಂಡರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರ ಪ್ರದೇಶವನ್ನು ಮಾರಿಕುಪ್ಪಂ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಮಾರಿಕುಪ್ಪಂಗೆ ಹೆಚ್ಚು ಪ್ರದೇಶ ವಿಸ್ತರಣೆಯಾದರೆ,  ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆ ಅಸ್ತಿತ್ವ ಕಳೆದುಕೊಳ್ಳಲಿದೆ. ಚಾಂಪಿಯನ್‌ರೀಫ್ಸ್‌ ಠಾಣೆ ಬದಲಿಗೆ ಬೂದಿಕೋಟೆಯಲ್ಲಿ ಠಾಣೆ ಸ್ಥಾಪಿಸಲು ಒಲವು ತೋರಲಾಗಿದೆ.
 
128 ಗ್ರಾಮಗಳ ವ್ಯಾಪ್ತಿ ಹೊಂದಿರುವ ಬಂಗಾರಪೇಟೆ ಪೊಲೀಸ್ ಠಾಣೆಯನ್ನು ವಿಭಜಿಸುವ ಯೋಜನೆ ಹೊಂದಲಾಗಿದೆ. ಬಂಗಾರಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆಗಳು ಕಾರ್ಯನಿರ್ವಹಿಸಲಿವೆ.   
 
ಬಂಗಾರಪೇಟೆ ಪೊಲೀಸ್ ವೃತ್ತಕ್ಕೆ ಸೇರುವ ಬೇತಮಂಗಲ ಪೊಲೀಸ್‌ ಠಾಣೆಯನ್ನು ಊರಿಗಾಂ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವವಿದೆ. ಸರ್ಕಲ್‌ ಠಾಣೆಯನ್ನಾಗಿ ಊರಿಗಾಂ ಬದಲಾಗಿ ಬೆಮಲ್‌ ನಗರ ಮಾಡುವ ಯೋಜನೆ ಇದೆ. ಇದರಿಂದ ಬೇತಮಂಗಲ ಗ್ರಾಮಸ್ಥರು ದೂರದ ಬಂಗಾರಪೇಟೆಗೆ ಹೋಗುವ ಬದಲು ಏಳು ಕಿ.ಮೀ ದೂರದ ಬೆಮಲ್ ನಗರಕ್ಕೆ ಬರಬಹುದು. 
 
**
ಪೊಲೀಸ್‌ ಠಾಣೆಗಳ ಪುನರ್‌ ವಿಂಗಡಣೆ ವರದಿ ಅಪ್‌ಡೇಟ್‌ ಆಗಬೇಕು. ಹಿಂದಿನ ಪ್ರಸ್ತಾವ ಪುನರ್‌ ಪರಿಶೀಲಿಸಲಾಗುವುದು. ಎಲ್ಲ ಠಾಣೆಗಳಿಗೂ ಸಮಾನ ಕರ್ತವ್ಯವಿರುವ ರೀತಿ ನೋಡಿಕೊಳ್ಳಬೇಕು.
–ಬಿ.ಎಸ್‌.ಲೋಕೇಶ್‌ಕುಮಾರ್‌, 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.