ADVERTISEMENT

ಕೆ.ಸಿ ವ್ಯಾಲಿ ಕಾಮಗಾರಿ ಪರಿಶೀಲನೆ

ಕೋಲಾರ ತಾಲ್ಲೂಕಿನ ನರಸಾಪುರ– ಜನ್ನಘಟ್ಟ ಕೆರೆಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 7:06 IST
Last Updated 5 ಜನವರಿ 2017, 7:06 IST

ಕೋಲಾರ: ತಾಲ್ಲೂಕಿನ ನರಸಾಪುರ ಹಾಗೂ ಜನಘಟ್ಟ ಕೆರೆಯಲ್ಲಿ ನಡೆಯುತ್ತಿರುವ ಕೆ.ಸಿ ವ್ಯಾಲಿ ಯೋಜನೆಯ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಬುಧವಾರ ಪರಿಶೀಲನೆ ಮಾಡಿದರು.

ಅಧಿಕಾರಿಗಳೊಂದಿಗೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಾಕ್‍ವೆಲ್ ಕಾಮಗಾರಿಯನ್ನು ವೀಕ್ಷಿಸಿದರು. ಅಲ್ಲದೇ, ಕಾಮಗಾರಿಯ ಬಗ್ಗೆ ಅಧಿಕಾರಿಗಳು ಹಾಗೂ ಯೋಜನೆಯ ಗುತ್ತಿಗೆದಾರರಿಂದ ಮಾಹಿತಿ ಪಡೆದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರು, ‘ನರಸಾಪುರದಲ್ಲಿ 5 ಮತ್ತು ಜನ್ನಘಟ್ಟದಲ್ಲಿ 1 ಪಂಪ್ ಮೂಲಕ  ನೀರು ಹರಿಸಲಾಗುವುದು. ನರಸಾಪುರ ಕೆರೆಯಲ್ಲಿ 1,700 ಎಂಎಲ್‌ಡಿ ನೀರು ಸಂಗ್ರಹಿಸಬಹುದು. 4 ದಿನದ ಅವಧಿಯಲ್ಲಿ ಈ ಕೆರೆ ಭರ್ತಿ ಮಾಡಬಹುದು’ ಎಂದು ವಿವರಿಸಿದರು.

ನರಸಾಪುರ ಕೆರೆಯಲ್ಲಿ ಸುಮಾರು 15 ಅಡಿ ಎತ್ತರದವರೆಗೆ ನೀರು ಸಂಗ್ರಹವಾಗಲಿದೆ. ಬೆಳ್ಳಂದೂರು ಬಳಿ ಸಂಸ್ಕರಿಸಿದ ನೀರನ್ನು 45 ಕಿ.ಮೀ ಏರು ಕೊಳವೆ ಮಾರ್ಗದ ಮೂಲಕ ಪಂಪ್ ಮಾಡಿ ನರಸಾಪುರ ಮತ್ತು ಮಾಲೂರು ತಾಲ್ಲೂಕಿನ ಶಿವಾರಪಟ್ಟಣ ಕೆರೆಗೆ ಹರಿಸಲಾಗುತ್ತದೆ. ನಂತರ ಕಾಲುವೆಗಳ ಮೂಲಕ ಇತರೆ ಕೆರೆಗಳಿಗೆ ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಳಿಕ ಜನ್ನಘಟ್ಟ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯು ಕೆರೆ ಅಂಗಳದಲ್ಲಿ ಸಂಗ್ರಹಿಸಿದ್ದ ಬೃಹತ್ ಪೈಪ್‌ಗಳು, ಕೆರೆಯಲ್ಲಿ ನಡೆಯುತ್ತಿರುವ ಜಾಕ್‍ವೆಲ್ ಮತ್ತು ಪಂಪ್‌ ಹೌಸ್‌ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.

ಪೈಪ್‌ಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಹೈದರಾಬಾದ್‌ ಕಾರ್ಖಾನೆಯಿಂದ ಪೈಪ್‌ಗಳನ್ನು ಖರೀದಿಸಲಾಗಿದ್ದು, ಒಂದು ಪೈಪ್ 12 ಮೀಟರ್ ಉದ್ದವಿದೆ ಮತ್ತು 1,700 ಕೆ.ಜಿ ತೂಕವಿದೆ. ಪೈಪ್‌ಗಳು ತುಕ್ಕು ಹಿಡಿಯದಂತೆ ಕ್ರಮ ವಹಿಸಲಾಗಿದೆ. ಬಳಸಲಾಗಿದೆ. ಪೈಪ್‌ಗಳ ಸುತ್ತ ಕಬ್ಬಿಣದ ಜಾಲರಿ ಮೂಲಕ ಎಂ–ಸ್ಯಾಂಡ್ ಬಳಸಿ ಸಿಮೆಂಟ್ ಮಾಡಲಾಗಿದೆ. ಕೆರೆಗಳಲ್ಲಿನ ಜಾಲಿ ಮರಗಳನ್ನು ಶೀಘ್ರವೇ ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಕಾಲಮಿತಿಯೊಳಗೆ ಪೂರ್ಣ: ಕಾಮಗಾರಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಕೆ.ಸಿ ವ್ಯಾಲಿ ತ್ಯಾಜ್ಯ ನೀರು ಸಂಸ್ಕರಣಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ನರಸಾಪುರ, ಜನ್ನಘಟ್ಟ ಕೆರೆಯಲ್ಲಿ ಜಾಕ್‍ವೆಲ್ ಹಾಗೂ ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಹೊಳಲಿ ಹಾಗೂ ಶಿವಾರಪಟ್ಟಣ ಕೆರೆಗಳಲ್ಲೂ ಪಂಪ್‌ಹೌಸ್‌ ಕಾಮಗಾರಿ ನಡೆಯುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳಲಿದೆ. ಜಾಕ್ವೆಲ್‌ಗಳ ಕಾಮಗಾರಿ ಏಪ್ರಿಲ್ ಒಳಗೆ ಮುಗಿಯಲಿದೆ. ಗಿಡಗಳ ತೆರವು ಕಾಮಗಾರಿ ಸದ್ಯದಲ್ಲೇ ಕೆಲಸ ಆರಂಭವಾಗಲಿದೆ ಎಂದರು.

ಪ್ರಯತ್ನ ಮಾಡುತ್ತಿದ್ದೇವೆ: ‘ಕೆ.ಸಿ ವ್ಯಾಲಿ ಯೋಜನೆ ಪೂರ್ಣಗೊಳಿಸಲು 2018ರ ಜೂನ್‌ವರೆಗೆ ಕಾಲಾವಕಾಶವಿದೆ. ಆದರೂ ಜಿಲ್ಲೆಯ ಪರಿಸ್ಥಿತಿ ಅರಿತು ಆದಷ್ಟು ಬೇಗನೆ ಕೆರೆಗಳಿಗೆ ನೀರು ಹರಿಸಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಪ್ಪ ಹೇಳಿದರು.

ಜಿಲ್ಲೆಯಲ್ಲಿ 4 ಕಡೆ ಮತ್ತು ಬೆಂಗಳೂರಿನ 2 ಕಡೆ ಪಂಪ್‌ಹೌಸ್‌ಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಬೆಳ್ಳಂದೂರಿನಿಂದ ಜಿಲ್ಲೆಗೆ 45 ಕಿ.ಮೀ ಕೊಳವೆ ಮಾರ್ಗ ನಿರ್ಮಿಸಬೇಕಿದ್ದು, ಈ ಉದ್ದೇಶಕ್ಕಾಗಿ ಪ್ರತಿನಿತ್ಯ 10 ಲೋಡ್ ಪೈಪ್‌ಗಳು ಬರುತ್ತಿವೆ. ಪೈಪ್‌ ಅಳವಡಿಕೆಗಾಗಿ ಪ್ರತಿ 5 ಕಿ.ಮೀಗೆ 45 ಮಂದಿಯ ತಂಡ ರಚಿಸಲಾಗಿದೆ. ಕೆಲಸ ಆರಂಭಗೊಂಡ  ತಿಂಗಳಲ್ಲಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಯೋಜನೆಗೆ ಬೇಕಿದ್ದ ಅನುಮತಿ ಸಿಕ್ಕಿದೆ. ಯಾವುದೇ ಕೆಲಸಕ್ಕೆ ಸಣ್ಣಪುಟ್ಟ ಅಡೆತಡೆ ಸಾಮಾನ್ಯ. ಸದ್ಯ ಅಂತಹ ಯಾವುದೇ ಅಡೆತಡೆ ಇಲ್ಲ. ಏನೇ ತೊಡಕು ಎದುರಾದರೂ ಆ.15ರೊಳಗೆ ಜಿಲ್ಲೆಯ ನರಸಾಪುರ ಕೆರೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ಗಳಾದ ಬಸವೇಗೌಡ, ಕೃಷ್ಣಪ್ಪ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಲಕ್ಷ್ಮಿ, ಗುತ್ತಿಗೆದಾರ ವಿಜಯ್‌ಕುಮಾರ್‌ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.