ADVERTISEMENT

ಕೇಂದ್ರದಿಂದ ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:24 IST
Last Updated 8 ಫೆಬ್ರುವರಿ 2017, 6:24 IST

ಕೆಜಿಎಫ್‌: ಬೆಮಲ್‌ ಜಾಗತಿಕ ಟೆಂಡರ್‌ಗಳಲ್ಲಿ ಸ್ವತಂತ್ರವಾಗಿ ಭಾಗವಹಿಸುವುದಕ್ಕೆ ಅರ್ಹತೆ ಪಡೆಯುವಲ್ಲಿ ಶ್ರಮಿಸಿದ ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಬೆಮಲ್‌ ಕಾರ್ಖಾನೆಗಳ ಸಮನ್ವಯ ಸಮಿತಿ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸರೆಡ್ಡಿ ಆರೋಪಿಸಿದರು.

ಬೆಮಲ್‌ ನಗರದಲ್ಲಿ ಸೋಮವಾರ ನಡೆದ ಸಮನ್ವಯ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ದೆಹಲಿ ಮೆಟ್ರೋಗಳ ಗುತ್ತಿಗೆಯನ್ನು ಬೆಮಲ್‌ ಪಡೆದಿದೆ. ಮೆಟ್ರೊ ಬೋಗಿಗಳನ್ನು ಕೇವಲ ₹ 9 ಕೋಟಿ ಗೆ ಮಾರಾಟ ಮಾಡುತ್ತಿದೆ.

ಇದೇ ಮೆಟ್ರೊ ಕಾರುಗಳಿಗೆ ಖಾಸಗಿ ಕಂಪೆನಿಗಳು ₹ 14–15 ಕೋಟಿ ಬೇಡಿಕೆ ಇಟ್ಟಿವೆ. ಬೆಮಲ್‌ ಕಂಪೆನಿಯನ್ನು ಮುಚ್ಚಿಬಿಟ್ಟರೆ, ಖಾಸಗಿ ಕಂಪೆನಿಗಳಿಗೆ ಸ್ಪರ್ಧಿಗಳೇ ಇರುವುದಿಲ್ಲ ಎಂಬ ಸಂಚನ್ನು ದೊಡ್ಡ ಮಟ್ಟದಲ್ಲಿ ರೂಪಿಸಲಾಗುತ್ತಿದೆ ಎಂದು ದೂರಿದರು.

₹ 36 ಸಾವಿರ ಕೋಟಿ ಮೆಟ್ರೊ ಕಾಮಗಾರಿ ಮೇಲೆ ಖಾಸಗಿ ಕಂಪೆನಿಗಳು ಕಣ್ಣು ಹಾಕಿವೆ. ದೇಶದ ರಕ್ಷಣಾ ಉತ್ಪನ್ನಗಳನ್ನು ಸಹ ಬೆಮಲ್‌ ತಯಾರಿಸುತ್ತಿದೆ. ದೇಶ ನಡೆಸಿದ ಎಲ್ಲಾ ಯುದ್ಧಗಳಲ್ಲಿಯೂ ಬೆಮಲ್‌ ಕಾರ್ಖಾನೆ ಪೂರಕವಾಗಿ ಸೈನಿಕರ ಬೆಂಬಲಕ್ಕೆ ನಿಂತಿದೆ. ಬೆಮಲ್‌ ಕಾರ್ಮಿಕರು ಎಂತಹ ಸನ್ನಿವೇಶದಲ್ಲಿಯೂ ದೇಶದ ಹಿತಾಸಕ್ತಿ ಕಾಯಲು ಸಿದ್ಧರಾಗಿರುತ್ತಾರೆ ಎಂದು ತಿಳಿಸಿದರು.

ಈ ಬಾರಿ ₹ 7216 ಕೋಟಿ ಮೌಲ್ಯದ ಉತ್ಪನ್ನಗಳ ಬೇಡಿಕೆಯನ್ನು ಬೆಮಲ್ ಈಗಾಗಲೇ ಪಡೆದಿದೆ. ಪ್ರತಿ ಕಾರ್ಮಿಕನೂ ಕಾರ್ಖಾನೆಗೆ ವೈಯಕ್ತಿಕವಾಗಿ ₹ 38.81 ಲಕ್ಷ  ಆದಾಯ ನೀಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಖಾಸಗೀಕರಣವೆಂಬ ಮಂತ್ರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಎಚ್ಚರಿಕೆ ನೀಡಿದರು.

ಮುನಿನಾಗಪ್ಪ, ಬೆಮಲ್‌ ಮೈಸೂರು ಘಟಕದ ಅಧ್ಯಕ್ಷ ದೇವದಾಸ್‌, ಪಾಲ್‌ಗಾಟ್‌ ವಿಭಾಗದ ಸವೀನ್‌, ಅಧಿಕಾರಿಗಳ ಸಂಘದ ಪ್ರಕಾಶ್‌ರೆಡ್ಡಿ, ಸತೀಶ್‌, ಗುರುಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.