ADVERTISEMENT

ಕೊಳವೆ ಬಾವಿ ಕೊರೆಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 10:35 IST
Last Updated 1 ಆಗಸ್ಟ್ 2015, 10:35 IST

ಮಾಲೂರು: ತಾಲ್ಲೂಕಿನ ಟೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಕಪುತ್ರ ಮತ್ತು ಬೆಟ್ಟಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಡಾ.ಬಂಡೂರು ಪಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿ, ಕಳೆದ 6 ತಿಂಗಳಿಂದ ಟೇಕಲ್ ಗ್ರಾ.ಪಂ.ನ ವೀರಕಪುತ್ರ ಮತ್ತು ಬೆಟ್ಟಹಳ್ಳಿ ಗ್ರಾಮಗಳಲ್ಲಿ ಕೊಳವೆ ಬಾವಿಯಲ್ಲಿ ನೀರು ಇಲ್ಲದೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ.  ಪ್ರಭಾವಿ ರಾಜಕಾರಣಿಯೊಬ್ಬರು ಕೊಳವೆ ಬಾವಿ ಕೊರೆಸಲು ತಡೆ ಹಿಡಿದಿದ್ದಾರೆ ಎನ್ನಲಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿದರು.

ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಿಗಾಗಿ ಕೊಳವೆ ಬಾವಿ ಕೊರೆಸಿ ಅನುಕೂಲ ಕಲ್ಪಿಸದಿದ್ದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿದ  ಎಂಜಿನಿಯರ್ ಬೈರಾರೆಡ್ಡಿ, ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಖಂಡರಾದ ನಾರಾಯಣಸ್ವಾಮಿ, ರಮೇಶ್, ನಾಗರಾಜ್, ಮುನಿಸ್ವಾಮಪ್ಪ, ವೆಂಕಟರಮಣಪ್ಪ, ಬಾಲಗಂಗಾಧರ ತಿಲಕ್, ನಾರಾಯಣಪ್ಪ, ಶಿವಣ್ಣ, ಬೀಮರಾವ್, ಕೃಷ್ಣಪ್ಪ, ಮುನಿಯಪ್ಪ, ಮೂರ್ತಿ, ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.