ADVERTISEMENT

ಕ್ರಷರ್‌ ಘಟಕ: ಜಿಲ್ಲಾಧಿಕಾರಿ ದಾಳಿ

7 ಅಕ್ರಮ ಘಟಕಗಳ ಪತ್ತೆ, 39 ವಾಹನಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 4:43 IST
Last Updated 22 ಸೆಪ್ಟೆಂಬರ್ 2017, 4:43 IST
ಕ್ರಷರ್‌ ಘಟಕ: ಜಿಲ್ಲಾಧಿಕಾರಿ ದಾಳಿ
ಕ್ರಷರ್‌ ಘಟಕ: ಜಿಲ್ಲಾಧಿಕಾರಿ ದಾಳಿ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಚಿಕ್ಕನಾಗವಲ್ಲಿ, ಜೊನ್ನಾಲಕುಂಟೆ, ಎಲಗನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕ್ರಷರ್‌ ಘಟಕಗಳ ಮೇಲೆ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು. ಪರವಾನಗಿ ನವೀಕರಿಸಿಕೊಳ್ಳದೆ ಅಕ್ರಮವಾಗಿ ನಡೆಯುತ್ತಿದ್ದ 7 ಘಟಕಗಳನ್ನು ಈ ವೇಳೆ ಪತ್ತೆ ಮಾಡಿದ ಅಧಿಕಾರಿಗಳು, 39 ವಾಹನಗಳನ್ನು ವಶಕ್ಕೆ ಪಡೆದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಎಸ್‌ಪಿ ಕಾರ್ತಿಕ್‌ ರೆಡ್ಡಿ , ಉಪವಿಭಾಗಾಧಿಕಾರಿ ಶಿವಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಿ.ಮಂಜುನಾಥ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾನ್‌ ಜಿ ನಾಯಕ್ ಅವರು ಅರಣ್ಯ, ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿ ಒಟ್ಟಾಗಿ ಈ ದಾಳಿ ನಡೆಸಿದರು.

ಮೂರು ಗ್ರಾಮಗಳ ವ್ಯಾಪ್ತಿಯಲ್ಲಿರುವ ಭಾರತ್‌ ರಾಕ್ಸ್, ವಿನಾಯಕ ಎಂಟರ್‌ಪ್ರೈಸಸ್‌, ಕಾರ್ತಿಕ್ ಸ್ಟೋನ್ಸ್‌, ಶಿವಾ ಸ್ಟೋನ್‌ ಕ್ರಷರ್‌, ಲಕ್ಷ್ಮೀ ಸ್ಟೋನ್‌ ಕ್ರಷರ್‌, ಅನಿಲ್‌ ಮೆಟಲ್ಸ್‌, ವೆನ್ನಾ ಎಂಟರ್‌ಪ್ರೈಸಸ್‌, ವೆಲ್‌ಕಮ್‌ ಸ್ಟೋನ್ಸ್, ಜಿಆರ್‌ಬಿ ಸ್ಟೋನ್‌ ಕ್ರಷರ್‌, ಜನಪ್ರಿಯಾ ಸ್ಟೋನ್‌ ಘಟಕ ಸೇರಿದಂತೆ ಸುಮಾರು 20 ಘಟಕಗಳಿಗೆ ಭೇಟಿ ನೀಡಿದ ತಂಡ, ಪರವಾನಗಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿತು.

ADVERTISEMENT

ಈ ವೇಳೆ 7 ಘಟಕಗಳು ಪರವಾನಗಿ ನವೀಕರಿಸಿಕೊಳ್ಳದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದನ್ನು ಪತ್ತೆ ಮಾಡಿದ ತಂಡ, ಈ ಘಟಕಗಳ ವ್ಯಾಪ್ತಿಯಲ್ಲಿದ್ದ ಹಿಟಾಚಿ, ಜೆಸಿಬಿ, ಟಿಪ್ಪರ್‌ಗಳು ಸೇರಿದಂತೆ 39 ವಾಹನಗಳನ್ನು ವಶಕ್ಕೆ ಪಡೆಯಿತು. ಅಕ್ರಮವಾಗಿ ಕ್ರಷರ್ ಘಟಕಗಳನ್ನು ನಡೆಸುತ್ತಿದ್ದವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಇವತ್ತಿನ ದಾಳಿಯಲ್ಲಿ ಅಕ್ರಮವೆಂದು ಪತ್ತೆಯಾದ ಏಳು ಘಟಕಗಳ ಮಾಲೀಕರ ವಿರುದ್ಧ ನಾವು ಸದ್ಯ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ. ಪೊಲೀಸ್‌ ತನಿಖೆಯ ವೇಳೆ ನಾವು ಪ್ರತಿ ಘಟಕದಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ, ಎಷ್ಟು ರಾಜಧನ ವಂಚನೆಯಾಗಿದೆ ಎಂದು ಸಮೀಕ್ಷೆ ನಡೆಸುತ್ತೇವೆ. ಬಳಿಕ ಅದನ್ನು ಸರ್ಕಾರಕ್ಕೆ ಕಟ್ಟಿಕೊಡುವಂತೆ ಕ್ರಮಜರುಗಿಸುತ್ತೇವೆ’ ಎಂದು ಹಿರಿಯ ಭೂ ವಿಜ್ಞಾನಿ ರಾನ್‌ ಜಿ ನಾಯಕ್ ತಿಳಿಸಿದರು.

‘ನಮಗೆ ಅನೇಕ ದಿನಗಳಿಂದ ಇಲ್ಲಿನ ಅಕ್ರಮ ಕ್ರಷರ್‌ ಬಗ್ಗೆ ದೂರು ಬರುತ್ತಲೇ ಇದ್ದವು. ಈವರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅನೇಕ ಬಾರಿ ದಾಳಿ ನಡೆಸಿದ್ದಾರೆ. ಅವುಗಳಿಗೆ ಸಂಬಂಧಪಟ್ಟಂತೆ ತನಿಖೆ ಪ್ರಗತಿಯಲ್ಲಿದೆ. ಇವತ್ತು ನಾವು ನಿರ್ದಿಷ್ಠ ಮಾಹಿತಿ ಮೆರೆಗೆ ಈ ದಾಳಿ ನಡೆಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.