ADVERTISEMENT

ಗಡಿ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:03 IST
Last Updated 28 ಮೇ 2017, 6:03 IST

ಶ್ರೀನಿವಾಸಪುರ: ತಾಲ್ಲೂಕಿನ ಗಡಿ ಭಾಗದ ಬಲ್ತಮರಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಆದರೂ ಗ್ರಾಮಸ್ಥರು ಅನ್ಯ ಮಾರ್ಗವಿಲ್ಲದೆ ಬಿದ್ದು ಎದ್ದು ಈ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದಾರೆ.

ಈ ರಸ್ತೆ ಕಿತ್ತುಹೋಗಿ ವರ್ಷಗಳು ಕಳೆದಿವೆ. ಆದರೆ ಸಂಬಂಧಿಸಿದ ಯಾವುದೇ ಅಧಿಕಾರಿ ಈ ಕಡೆ ಬಂದಿಲ್ಲ. ಗ್ರಾಮಸ್ಥರ ದೂರಿಗೂ ಮನ್ನಣೆ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸುಮಾರು 2 ಕಿ.ಮೀ ದೂರವಿದೆ. ಅಲ್ಲಿಂದ ಆಂಧ್ರಪ್ರದೇಶದ ಗಡಿಯ ವರೆಗೆ ಅದೇ ರಸ್ತೆಯಲ್ಲಿ ಸಾಗಬೇಕು. ಅತ್ಯಂತ ಕೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಇಲ್ಲಿನ ಜನರದಾಗಿದೆ.

ADVERTISEMENT

ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳ ಮೇಲೆ ಬಿದ್ದು ಗಾಯಗೊಂಡವರಿಗೆ ಲೆಕ್ಕವಿಲ್ಲ. ವಾಹನ ಅಪಘಾತಗಳೂ ಸಂಭವಿಸುತ್ತಿವೆ. ಇಷ್ಟಾದರೂ ಗ್ರಾಮಸ್ಥರ ಅಳಲನ್ನು ಕೇಳುವವರಿಲ್ಲ ಎನ್ನುತ್ತಾರೆ.

ಇಲ್ಲಿನ ಜನ ಪ್ರತಿನಿಧಿಗಳೂ ಸಹ ರಸ್ತೆ ದುಸ್ಥಿತಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಣಿಸಿ ಕೊಳ್ಳುವ ಮುಖಂಡರು ಮತ್ತೆ ಜನರ ಬಳಿ ಬರುವುದಿಲ್ಲ ಎಂಬುದು ಅವರ ಆಪಾದನೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ರಸ್ತೆ ದುರಸ್ತಿ ಮಾಡಿ ಡಾಂಬರು ಹಾಕದಿದ್ದಲ್ಲಿ ಗ್ರಾಮಸ್ಥರು ರಾಯಲಪಾಡ್ ಸಮೀಪ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.