ADVERTISEMENT

ಗಡಿ ಭಾಗದಲ್ಲಿ ಸಾಹಿತ್ಯ, ವಾಚನಾಭಿರುಚಿ ಬೆಳಸಿ

ಬಂಗಾರಪೇಟೆ: 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 4:58 IST
Last Updated 14 ಫೆಬ್ರುವರಿ 2017, 4:58 IST
ಬಂಗಾರಪೇಟೆಯಲ್ಲಿ ಸೋಮವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಿದರು (ಎಡಚಿತ್ರ). ಸಮ್ಮೇಳನದಲ್ಲಿ ಭಾಗವಹಿಸಿದ್ದ ಜನರು
ಬಂಗಾರಪೇಟೆಯಲ್ಲಿ ಸೋಮವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಿದರು (ಎಡಚಿತ್ರ). ಸಮ್ಮೇಳನದಲ್ಲಿ ಭಾಗವಹಿಸಿದ್ದ ಜನರು   

ಬಂಗಾರಪೇಟೆ: ‘ಜನರಲ್ಲಿ ಸಾಹಿತ್ಯ ಹಾಗೂ ವಾಚನಾಭಿರುಚಿ ಬೆಳೆಸುವ ಮೂಲಕ ಗಡಿ ಭಾಗದಲ್ಲಿ ಕನ್ನಡ ಡಿಂಡಿಮ ಮೊಳಗಿಸಬೇಕು’ ಎಂದು ಸಮ್ಮೇಳ ನಾಧ್ಯಕ್ಷೆ ಸರಿತಾ ಜ್ಞಾನಾನಂದ ಅವರು ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಸಾಪ ತಾಲ್ಲೂಕು ಘಟಕ  ಸೋಮವಾರ ‘ಹುತಾತ್ಮ ಯೋಧರ ಮಹಾದ್ವಾರ’ ‘ಅನ್ನದಾತರ ವೇದಿಕೆ’ ಯಲ್ಲಿ ಏರ್ಪಡಿಸಿದ್ದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಅಧ್ಯಯನ ಗೋಷ್ಠಿ, ಚರ್ಚೆ, ವಿಚಾರ ಸಂಕಿರಣ ನಡೆಸುವ ಮೂಲಕ ಸಾಹಿತ್ಯಾಭಿವೃದ್ಧಿಗೆ ಉತ್ತಮ ವಾತಾವ ರಣ ಸೃಷ್ಟಿಸಬೇಕು. ವಿಶೇಷವಾಗಿ ಪ್ರತಿ ಶಾಲೆಯಲ್ಲಿ ಕನ್ನಡದ ಕಂಪನ್ನು ಪಸರಿ ಸುವ ಕೆಲಸ ನಡೆಯಬೇಕು’ ಎಂದು ಅವರು ಹೇಳಿದರು.

‘ಕನ್ನಡಾಭಿಮಾನಿಗಳನ್ನು ಸಂಘಟಿಸಿ ಕಥಾ ರಚನೆ, ನಾಟಕ ರಚನೆ, ಕಮ್ಮಟ ಗಳನ್ನು ಆಯೋಜಿಸುವ ಮೂಲಕ ಕಸಾಪ ಉದಯೋನ್ಮುಖ ಬರಹಗಾರರಿಗೆ ದೀವಿ ಗೆಯಾಗಬೇಕು. ಸಾಹಿತ್ಯದ ಜತೆಗೆ ಸಂಗೀತ, ಸಂಸ್ಕಾರ, ಸಂಸ್ಕೃತಿ ರೂಢಿ ಸುವ ವೇದಿಕೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಕಲೆ, ಸಾಹಿತ್ಯಕ್ಕೆ ಆದ್ಯತೆ ನೀಡಿದ್ದ ಜಿಲ್ಲೆಯ ಜನ ಬರಗಾಲಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವುದು ವಿಷಾದದ ಸಂಗತಿ. ಅನ್ನದಾತ ಉಳಿದರೆ ಮಾತ್ರ ಜನರ ಸಮೃದ್ಧಿ ಸಾಧ್ಯ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ರೈತರು ಉಳಿದರೆ ದೇಶ ಉಳಿಯುತ್ತದೆ’ ಎಂದು ಅವರು ಹೇಳಿದರು. ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಯೋಧರಿಗೆ ಚಿರಋಣಿಯಾಗಿರಬೇಕು’ ಎಂದರು.

ಪುಸ್ತಗಳ ಬಿಡುಗಡೆ: ಸರಿತಾ ಜ್ಞಾನಾನಂದ ಅವರ ‘ಶರಭಾಂಕಲಿಂಗ ಶತಕ’, ಕವಿ ಎಂ.ಆರ್‌.ದೇವರಾಜ್‌ (ನಿಸರ್ಗತನಯ) ಅವರ ‘ಚುಟುಕಾ ಮೃತ’, ಬ್ಯಾಡಬೆಲೆ ಮುರಳಿ ಅವರ ‘ಬೆಳ್ಳಿ ಸಂಭ್ರಮ’ ಪುಸ್ತಕಗಳನ್ನು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಅವರು ಬಿಡುಗಡೆ ಮಾಡಿದರು.
 

ಅಭಿನಂದನೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಟಿ.ಆನಂದ ಕುಮಾರ್, ವಿ.ಲಕ್ಷ್ಮಯ್ಯ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಈ.ವೆಂಕಟ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಸ್.ಎನ್‌.ನಾರಾಯಣ ಸ್ವಾಮಿ ಸ್ಮರಣ ಸಂಚಿಕೆ ‘ಸಮರ್ಪಣ’ ಲೋಕಾರ್ಪಣೆ ಮಾಡಿದರು. ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ತೇ.ಸೀ.ಬದರೀನಾಥ್ ಆಶಯ ನುಡಿಗಳನ್ನಾಡಿದರು.

ತಹಶೀಲ್ದಾರ್‌ ಎಲ್‌.ಸತ್ಯಪ್ರಕಾಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಲಕ್ಷ್ಮಿ, ಕಾರ್ಯ ನಿರ್ವಹಣಾಧಿಕಾರಿ ನಾರಾ ಯಣಸ್ವಾಮಿ, ಕಸಾಪ ಜಿಲ್ಲಾ ಘಟಕ ಕಾರ್ಯದರ್ಶಿ ಆರ್‌.ಅಶ್ವತ್ಥ, ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕ ಅಧ್ಯಕ್ಷ ಆಂಜನೇಯಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಶಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಮದಿ ಅಳಗನ್, ಪ್ರಮುಖರಾದ ಚಿನ್ನಿವೆಂಕ ಟೇಶ್, ಪ್ರಹ್ಲಾದ್ ಗೌಡ, ತಿಮ್ಮಾಪುರ ನಾಗರಾಜ್, ಶ್ರೀನಿವಾಸಪುರದ ಕುಬೇರ ಗೌಡ, ಚಂದ್ರಪ್ಪ ಇತರರು
ಉಪಸ್ಥಿತರಿದ್ದರು.

ಕಸಾಪ ಚಟುವಟಿಕೆಯಲ್ಲಿ ರಾಜಕೀಯ ಸಲ್ಲ

ADVERTISEMENT

ಬಂಗಾರಪೇಟೆ: ಕನ್ನಡ ಸಾಹಿತ್ಯ ಪರಿಷತ್ತು ಜ್ಞಾನ ಹಾಗೂ ಸಾಹಿತ್ಯ ಗಂಗೋತ್ರಿಯಾಗಿದೆ. ಕಸಾಪ ಚಟುವಟಿಕೆಗಳಲ್ಲಿ ರಾಜಕೀಯ ಬೆರೆಸುವುದನ್ನು ಸಹಿಸುವುದಿಲ್ಲ ಎಂದು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ ಅವರು, ‘ಕೆಲವರ ಕುತಂತ್ರದಿಂದ ಇಲ್ಲಿ ನೆರೆದಿರುವ ಕನ್ನಡಾಭಿಮಾನಿಗಳ ಸಂಖ್ಯೆ ಕ್ಷೀಣಿಸಿದೆ. ಸಮ್ಮೇಳನಕ್ಕೆ ಹಾಜರಾಗದಂತೆ ಅವರನ್ನು ತಡೆಯಲಾಗಿದೆ. ಆದರೆ ಕನ್ನಡ ಭಾಷೆ, ಸಂಸ್ಕೃತಿಗೆ ಇಡೀ ವಿಶ್ವವನ್ನು ಒಗ್ಗೂಡಿಸುವ ಶಕ್ತಿಯಿದೆ ಎನ್ನುವುದನ್ನು ಅರಿಯಬೇಕು’ ಎಂದರು.

‘ಸಾಹಿತ್ಯ ಪರಿಷತ್ತನ್ನು ಸಾಹಿತ್ಯಿಕ ನೆಲೆಗೆಟ್ಟಿನಲ್ಲಿ ಪರಿಗಣಿಸಿ, ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡ ಲಾಗಿದೆ. ಹಿರಿಯರನ್ನು ಪಕ್ಕಕ್ಕೆ ಸರಿಸಿ, ನಮ್ಮನ್ನು ನಾವೇ ಗೌರವಿಸಿಕೊಳ್ಳುವುದು ಶ್ರೇಷ್ಟವಲ್ಲ’ ಎನ್ನುವುದನ್ನು ಕೆಲವರು ತಿಳಿಯಬೇಕು’ ಎಂದರು.

‘ನಾನು ಶ್ರೇಷ್ಠ ಎಂಬುದು ಆತ್ಮ ವಿಶ್ವಾಸ. ನಾನೇ ಶ್ರೇಷ್ಠ ಎನ್ನುವುದು ಅಹಂಕಾರ. ಇಲ್ಲಿ ಸರ್ವಾಧಿಕಾರಕ್ಕೆ ಮನ್ನಣೆ ಸಿಗದು. ಕನ್ನಡ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವವರು ಕನ್ನಡಿಗರೇ ಅಲ್ಲ. ಮಿಗಿಲಾಗಿ ಕಸಾಪ ತತ್ವ, ಆದರ್ಶಗಳಿಗೆ ಧಕ್ಕೆ ಉಂಟುಮಾಡಲು ಬಿಡುವುದಿಲ್ಲ’ ಎಂದರು.

ಸಂಸ್ಕೃತ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ಶ್ರದ್ಧಾ ಭಕ್ತಿಯಿಂದ  ಸಾಹಿತ್ಯ ಅಭಿವೃದ್ಧಿಗೆ  ಶ್ರಮಿಸುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ನಾಲ್ಕೈದು ಭಾಷೆಯಲ್ಲಿ ಪರಿಣಿತಿ ಹೊಂದಿರುವ ಸರಿತಾ ಜ್ಞಾನಾನಂದ ಅವರನ್ನು ಭಾಷಾ ಭಾರತಿ ಗೌರವ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿ ತಿಂಗಳು ಆದಾಯದಲ್ಲಿ ಪುಸ್ತಕಗಳ ಖರೀದಿಗೆ ಇಂತಿಷ್ಟೆ ಹಣ ಮೀಸಲಿಡಬೇಕು. ಕಥೆ, ಕಾದಂಬರಿ, ಕವನ, ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಮಕ್ಕಳಿಗೆ ಕೊಡಿಸಿ, ಓದುವ ಹವ್ಯಾಸ ರೂಢಿಸಬೇಕು. ಕೇರಳದಲ್ಲಿ  ಪ್ರತಿ ಕುಟುಂಬ ₹ 2 ಸಾವಿರ  ಪುಸ್ತಕ ಖರೀದಿಗೆ ಮೀಸಲಿಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿವೆ.  ಸಾಹಿತ್ಯ ಗತ ವೈಭವದ ಪುನರುಜ್ಜೀವನ ಮಾಡಬೇಕು ಎಂದು ಅವರು ಹೇಳಿದರು. ಟಿವಿ ಜ್ಞಾನ ಮಾಧ್ಯಮವಲ್ಲ. ಅದು ಕೇವಲ ಮಾಹಿತಿಗಾಗಿ ಅಷ್ಟೆ. ಟಿವಿ ವೀಕ್ಷಿಸುವುದನ್ನು ಬಿಟ್ಟು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನಾವು ಸರ್ವತೋಮುಖವಾಗಿ ಬೆಳೆವಣಿಗೆ ಹೊಂದ ಬಹುದು ಎಂದರು.

ಸಂತೋಷ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆದಿಲ್‌ ಪಾಷ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ದತ್ತಿ ಸಮಿತಿ ಸದಸ್ಯ ಎಂ.ಎಸ್.ರಾಮಪ್ರಸಾದ್‌ ಇತರರು ಹಾಜರಿದ್ದರು. ಸಂಜೆ ಸಬಲೀಕರಣಕ್ಕಾಗಿ ಸುಧಾರಿತ ಕೃಷಿ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ನಾಗರಾಜ್‌, ನೀರಿನ ಸದ್ಬಳಕೆ ಕುರಿತು ಟ್ರೀಸ್‌ ಸಂಸ್ಥೆ ಅಧ್ಯಕ್ಷ  ಎಂ.ನಾರಾಯಣಸ್ವಾಮಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.