ADVERTISEMENT

ಗ್ರಾಮೀಣ ಭಾಗದಲ್ಲಿ ರಂಗಭೂಮಿಯ ಸೊಗಡು

ವಿಶ್ವ ರಂಗ ಭೂಮಿ ದಿನಾಚರಣೆ; ಕಲಾವಿದರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:22 IST
Last Updated 28 ಮಾರ್ಚ್ 2017, 8:22 IST
ಕೋಲಾರ: ‘ರಂಗಕರ್ಮಿಗಳು ಸಾಮಾಜಿಕ ಅನ್ಯಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪದವಿ ಪೂರ್ವ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್‌ ಅಭಿಪ್ರಾಯಪಟ್ಟರು.
 
ಕರ್ನಾಟಕ ಕಲಾ ಸಂಘ, ಭಾರ್ಗವ ಕಲಾನಿಕೇತನ ಹಾಗೂ ಜಿಲ್ಲಾ ಪದವಿ ಪೂರ್ವ ಕನ್ನಡ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವರಂಗ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರೀಕ್ ದೇಶದಲ್ಲಿ ಹುಟ್ಟಿದ ರಂಗಭೂಮಿ ಕಲೆಯ ನಂಟು ಭಾರತಕ್ಕೂ ಹಬ್ಬಿತು’ ಎಂದರು.
 
‘ರಾಜ್ಯದ ಗ್ರಾಮೀಣ ಭಾಗದಲ್ಲಿ ಇಂದಿಗೂ ರಂಗಭೂಮಿಯ ಸೊಗಡಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಈ ಹಿಂದೆ ರಂಗಭೂಮಿಯೇ ಸ್ಥಳೀಯರ ಬದುಕಾಗಿತ್ತು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವರೂ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಾಜ್ಯದ ಉದ್ದಗಲಕ್ಕೂ ಛಾಪು ಮೂಡಿಸಿದ್ದಾರೆ’ ಎಂದರು.
 
‘ಈ ಹಿಂದೆ ರಂಗಕರ್ಮಿಗಳು ಬಡತನದ ಬೇಗೆಯಲ್ಲಿ ಬೆಂದು ಬದುಕನ್ನು ರಂಗ ಕಲೆಗೋಸ್ಕರ ಮುಡುಪಾಗಿಟ್ಟು ಸಮಾಜದ ಓರೆಕೋರೆ ತಿದ್ದುವ ಕೆಲಸ ಮಾಡುತ್ತಿದ್ದರು. ಅಲ್ಲದೇ, ಸಮಾಜದ ಎಲ್ಲಾ ಜಾತಿ ಜನಾಂಗದವರು ಹೇಗೆ ಸಂಯಮದಿಂದ ಬದುಕಬಹು ದೆಂಬ ಸಂದೇಶಗಳನ್ನು ನಾಟಕಗಳ ಮೂಲಕ ಸಾರುತ್ತಿದ್ದರು. ಅವರ ದೂರದೃಷ್ಟಿ ಮತ್ತು ಹೊಣೆಗಾರಿಕೆಯನ್ನು ಎಂದಿಗೂ ಮರೆಯುವಂತಿಲ್ಲ’ ಎಂದರು.
 
‘ಹಾದಿ ತಪ್ಪಿರುವ ಇಂದಿನ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರಲು ರಂಗಭೂಮಿ ಹಾಗೂ ಸಾಹಿತ್ಯ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಜನರಲ್ಲಿ ಸಂಚಲನವ ಉಂಟು ಮಾಡುವ ಮಾಂತ್ರಿಕ ಶಕ್ತಿ ರಂಗಭೂಮಿಗೆ ಇದೆ. ಆದರೆ, ಆಧುನಿಕತೆ ಭರಾಟೆಯಲ್ಲಿ ರಂಗಭೂಮಿ ನಶಿಸುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಕಳವಳ ವ್ಯಕ್ತಪಡಿಸಿದರು.
 
ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ರಿಪಬ್ಲಿಕನ್‌ ಪಾರ್ಟ್‌ ಆಫ್‌ ಇಂಡಿಯಾ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯ್‌ಕುಮಾರ್‌, ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಬಿ.ವಿ.ವಿ.ಗಿರಿ, ಭಾರ್ಗವ ಕಲಾನಿಕೇತನ ಸಂಘದ ಅಧ್ಯಕ್ಷ ಡಿ. ಚೇತನ್‌ಪ್ರಸಾದ್‌  ಪಾಲ್ಗೊಂಡಿದ್ದರು.
 
ದಮನಿತರಿಗೆ ಧ್ವನಿಯಾಗಿ
ಮಾಲೂರು:
‘ಸಮಾಜದ ದಮನಿತರ ಪರವಾಗಿ ಎಲ್ಲರೂ ಧ್ವನಿಯಾಗಬೇಕು’ ಎಂದು ರಂಗಕರ್ಮಿ ಪ್ಲೊರ್ ಅಚ್ಯುತ್  ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಸೋಮವಾರ   ರಂಗವಿಜಯ ಟ್ರಸ್ಟ್ ಹಮ್ಮಿಕೊಂಡಿದ್ದ ವಿಶ್ವ ರಂಗದಿನ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ರಂಗ ಗೌರವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

‘ವ್ಯವಸ್ಥೆಯನ್ನು ಎಡ ಹಾಗೂ ಬಲ ಪಂಥ ಎಂದು ಬೇರ್ಪಡಿಸುವ ಜನರು ಮಹಿಳೆಯರನ್ನು ಯಾವುದೇ ಮಡಿವಂ ತಿಕೆಗೆ ದೂಡಬಾರದು. ಮನುಜ ಮತಿಯ ಚೌಕಟ್ಟಿನಲ್ಲಿ ಕಾಣಬೇಕು’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ರಂಗಕರ್ಮಿ ದಾಕ್ಷಾಯಿಣಿ ಭಟ್,‘ಧರ್ಮದ ಚೌಕಟ್ಟನ್ನು ಮೀರಿ ಮನುಷ್ಯತ್ವದಿಂದ ನೋಡುವ, ಜೀವನ ನಡೆಸುವ ಮನಸು ಜನರಲ್ಲಿ ಬರಬೇಕಾಗಿದೆ’ ಎಂದರು.
‘ರಂಗಭೂಮಿ ಹಳೆಯ ಪದ್ಧತಿ ಕಳಚಿಕೊಂಡು ಆಧುನಿಕ ಪರಿಕಲ್ಪನೆಯಲ್ಲಿ ಜೀವಂತಿಕೆ ಉಳಿಸುಕೊಂಡು ಪ್ರಬಲವಾಗಿದೆ. ರಂಗಭೂಮಿ ಜನರಲ್ಲಿ ಸೂಕ್ಷ್ಮ ಸಂವೇದನೆಯ ಸಮಷ್ಠಿ ಪ್ರಜ್ಞೆಯನ್ನು ನೀಡಿ ಎಲ್ಲವನ್ನು ಎದುರಿಸಿ ನಿಲ್ಲಬಲ್ಲದು’ ಎಂದು ಅಭಿಪ್ರಾಯಪಟ್ಟರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕಾರಹಳ್ಳಿ ಲಕ್ಷ್ಮಮ್ಮ ಕೈವಾರ ನಾರಾಯಣಪ್ಪ ಹಾಗೂ ಯೋಗಿ ವೇಮನರ ಪದಗಳ ಬುರ್ರ ಕಥಾ ಹಾಡುಗಳನ್ನು ಹಾಡಿದರು. 

ಲಕ್ಷ್ಮಮ್ಮ, ಪ್ಲೊರಾ ಅಚ್ಯುತ್ , ದಾಕ್ಷಾಯಿಣಿ ಭಟ್ ಅವರಿಗೆ ರಂಗಗೌರವ ನೀಡಲಾಯಿತು. ಕರ್ನಾಟಕ ರಂಗ ಪರಿಷತ್ತಿನ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಎ.ಅಶ್ವಥ್ ರೆಡ್ಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಮುದಾಯದ ಅಧ್ಯಕ್ಷ ಅಚ್ಯುತ್, ರಂಗ ವಿಜಯಾ ಟ್ರಸ್ಟ್ ಅಧ್ಯಕ್ಷ  ವಿಜಿ,  ಗೀತಾ ಪ್ರಕಾಶ್, ಕುಂತೂರು ಚಂದ್ರಪ್ಪ, ಜೌನ್ ಆಲ್ಮೇಡಾ, ಲಕ್ಕೂರು ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.