ADVERTISEMENT

ಚನ್ನಕಲ್ಲು ಗ್ರಾಮದಲ್ಲಿ ವೀರಗಲ್ಲು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 7:25 IST
Last Updated 10 ಸೆಪ್ಟೆಂಬರ್ 2017, 7:25 IST

ಮಾಲೂರು: ತಾಲ್ಲೂಕಿನ ಚನ್ನಕಲ್ಲು ಗ್ರಾಮದ ರಾಮಣ್ಣ ಅವರ ಜಮೀನಿನಲ್ಲಿ ವೀರಗಲ್ಲುಗಳು ಮತ್ತು ಶಿಲಾ ಶಾಸನಗಳು ಪತ್ತೆಯಾಗಿವೆ. ಜಮೀನಿನಲ್ಲಿ ಬೆಳೆದಿದ್ದ ಗಿಡ ಕಂಟಿಗಳನ್ನು ಜಿಸಿಬಿಯಿಂದ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ದೊರೆತ ವೀರಗಲ್ಲಿನಲ್ಲಿ ಕುದುರೆ ಮೇಲೆ ಕುಳಿತುಕೊಂಡು ಕತ್ತಿಯಿಂದ ಯುದ್ಧ ಮಾಡುತ್ತಿರುವ ಪುರುಷರ ಚಿತ್ರಗಳನ್ನು ಕೆತ್ತಲಾಗಿದೆ.

ವೀರಗಲ್ಲು ದೊರತಿರುವ ಸ್ಥಳದಲ್ಲಿ ಪ್ರತಿ ಹುಣಿಮೆ ಮತ್ತು ಅಮಾವಾಸ್ಯೆಯಲ್ಲಿ ರಾತ್ರಿ ವೇಳೆ ಜೋಡಿ ನಾಗರ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು ಎಂದು ಗ್ರಾಮಸ್ಥರು ಹೇಳುವರು. ವೀರಗಲ್ಲು ದೊರೆತ ನಂತರ ಹಾವುಗಳು ಕಾಣಿಸುತ್ತಿಲ್ಲ ಎಂದು ತಿಳಿಸುವರು. 120 ಮನೆಗಳ ಗ್ರಾಮದ ಮುಂಭಾಗಲ್ಲಿ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕಲ್ಲುಗುಡ್ಡ ಇದೆ. ಕಲ್ಲುಗುಡ್ಡ ಎಂದರೆ ಗ್ರಾಮಸ್ಥರಲ್ಲಿ ಭಯ ಭಕ್ತಿ ಇದೆ.

ಗುಡ್ಡವನ್ನು ಕೆಲವು ಕಿಡಿಗೇಡಿಗಳು ನಾಶಮಾಡಲು ಮುಂದಾದಾಗ ರಕ್ತ ಕಾರಿ ಸತ್ತಿದ್ದರು ಎನ್ನುವ ಮಾತುಗಳು ಗ್ರಾಮದಲ್ಲಿ ಜನ ಜನಿತ. ನೂರಾರು ವರ್ಷಗಳ ಹಿಂದೆ ಗ್ರಾಮದ ಬಳಿ ದೊಡ್ಡ ಕಲ್ಲು ಬಂಡೆಗಳಿದ್ದವು. ಇವುಗಳ ಕೆತ್ತನೆ ಕೆಲಸ ಮಾಡಿ ಜನರು ಜೀವನ ನಡೆಸುತ್ತಿದ್ದರು. ಆದ್ದರಿಂದ ಗ್ರಾಮಕ್ಕೆ ಚನ್ನಕಲ್ಲು ಎಂಬ ಹೆಸರು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುವರು.

ADVERTISEMENT

ಚನ್ನಕಲ್ಲು ಗ್ರಾಮದ ಮೇಲೆ ಸ್ಥಳೀಯ ಪಾಳೇಗಾರರು ದಾಳಿ ನಡೆಸಲು ಬಂದಾಗ ಗ್ರಾಮ ಕಾಯುವ ವೀರ ಕಾವುಲುಗಾರ ಕಲ್ಲುಗುಡದ ಬಳಿ ಅವರನ್ನು ಹಿಮ್ಮೆಟ್ಟಿಸಿದ್ದರು. ಕಾಳಗದಲ್ಲಿ ಚನ್ನಕಲ್ಲು ಗ್ರಾಮದ ಕಾವುಲುಗಾರ ಕಲ್ಲುಗುಡ್ಡದ ಮೇಲೆ ಮರಣ ಹೊಂದಿದ್ದರಿಂದ ಆ ಕಲ್ಲು ಗುಡ್ಡಕ್ಕೆ ಗ್ರಾಮಸ್ಥರು ಇಂದಿಗೂ ಪೂಜೆ ಸಲ್ಲಿಸುತ್ತಾರೆ.
ಐತಿಹಾಸಿಕವಾದ ಗುಡ್ಡವನ್ನು ರಕ್ಷಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.