ADVERTISEMENT

ಚಿರತೆ ದಾಳಿ ತಡೆಗೆ ಅಧಿಕಾರಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 9:42 IST
Last Updated 12 ಜುಲೈ 2017, 9:42 IST

ಕೋಲಾರ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಚಿರತೆಗಳು ಜನರನ್ನೇ ತಿನ್ನುವ ಮಟ್ಟಕ್ಕೆ ಹೋಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್ ಸಿಡಿಮಿಡಿಯಾದರು.

ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಹಲವೆಡೆ ಚಿರತೆಗಳು ಜಾನುವಾರುಗಳನ್ನು ತಿಂದಿವೆ. ಅಲ್ಲದೇ, ಜನರ ಮೇಲೂ ಎರಗಿವೆ. ಚಿರತೆ ದಾಳಿಯಿಂದಾಗಿ ಜನ ಹಾಗೂ ಜಾನುವಾರುಗಳಿಗೆ ರಕ್ಷಣೆ ಇಲ್ಲವಾಗಿದೆ. ಪ್ರತಿದಿನ ಆತಂಕದಲ್ಲಿಯೇ ಬದುಕುವಂತಾಗಿದೆ’ ಎಂದು ಹೇಳಿದರು.

‘ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಟ್ಟ ಗುಡ್ಡ ಹಾಗೂ ಅರಣ್ಯದಂಚಿನ ಜಮೀನುಗಳಲ್ಲಿ ರೈತರು ಒಂಟಿಯಾಗಿ ಓಡಾಡುವುದೇ ಕಷ್ಟವಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಉಪಟಳ ತಡೆಯದಿದ್ದರೆ ರೈತರು ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವುದು ಹೇಗೆ. ಅಧಿಕಾರಿಗಳು ಶೀಘ್ರವೇ ಈ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾ ಪಂಚಾಯಿತಿಯ ಮುಂದಿನ ಸಭೆಯನ್ನು ಸದಸ್ಯರೆಲ್ಲಾ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜನ ಭಯಭೀತ: ಇದಕ್ಕೆ ಧ್ವನಿ ಗೂಡಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ. ಯಶೋದಾ, ‘ಮಾಲೂರು ತಾಲ್ಲೂಕಿನ ಮಾಸ್ತಿ ಬಳಿ ಎಂಟು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಸಾಮಾನ್ಯವಾಗಿ ಮನುಷ್ಯರ ಬಳಿ ಬರದ ಚಿರತೆಗಳು ವ್ಯಕ್ತಿಯೊಬ್ಬರ ದೇಹದ ಮುಕ್ಕಾಲು ಭಾಗ ತಿಂದಿವೆ. ಈ ಘಟನೆಯಿಂದ ಮಾಸ್ತಿ ಮತ್ತು ಸುತ್ತಮುತ್ತಲ ಗ್ರಾಮಗಳ ಜನ ಭಯಭೀತರಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಚಿರತೆ ಭಯದಿಂದ ಜನ ಮಾಸ್ತಿ ಸುತ್ತಮುತ್ತ ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ. ಕ್ಷೇತ್ರದ ಶಾಸಕ ಮಂಜುನಾಥಗೌಡ ಅವರು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ದಿನವಿಡೀ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ. ಅಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು’ ಎಂದು ಒತ್ತಾಯಿಸಿದರು.

‘ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಚಿರತೆಗಳು 48 ಕುರಿಗಳನ್ನು ಕೊಂದಿವೆ. ಆದರೆ, ಈವರೆಗೂ ಕುರಿಗಳ ಮಾಲೀಕರಿಗೆ ಪರಿಹಾರ ಕೊಟ್ಟಿಲ್ಲ. ಅದೇ ರೀತಿ ಚೋಳಘಟ್ಟದಲ್ಲಿ ಚಿರತೆಗಳಿಂದ 20 ಕುರಿ ಕಳೆದುಕೊಂಡಿರುವ ಮಾಲೀಕರಿಗೆ ಪರಿಹಾರ ನೀಡಿಲ್ಲ. ತಾಲ್ಲೂಕಿನ ವಿವಿಧೆಡೆ ಚಿರತೆಗಳು ಕಾಣಿಸಿಕೊಂಡಿದ್ದು, ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಿಡಿಕಾರಿದರು. ಆದರೆ, ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಸಭೆಗೆ ಹಾಜರಾಗಿರಲಿಲ್ಲ.

ಶ್ರೀಮಂತರ ಪಾಲಾಗುತ್ತಿವೆ: ‘ಸರ್ಕಾರದ ಬಹುಪಾಲು ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ. ರೇಷ್ಮೆ ಇಲಾಖೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅಧಿಕಾರಿಗಳು ತಮಗೆ ಬೇಕಾದವರನ್ನು ಕಚೇರಿಗೆ ಕರೆಸಿಕೊಂಡು ಸವಲತ್ತುಗಳನ್ನು ವಿತರಿಸುತ್ತಿದ್ದಾರೆ’ ಎಂದು ವೆಂಕಟೇಶ್ ದೂರಿದರು.

‘ರೇಷ್ಮೆ ಹುಳು ಸೋಂಕು ನಿವಾರಕ ಔಷಧಗಳ ಗುಣಮಟ್ಟ ಕಳಪೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿನ ಬಡ ಮಕ್ಕಳಿಗೆ ಖಾಸಗಿ ವ್ಯಕ್ತಿಗಳು ಪುಸ್ತಕ, ಪೆನ್ನು, ಬಟ್ಟೆ ವಿತರಿಸಲು ಬಂದರೆ ಅಧಿಕಾರಿಗಳು ಅಡ್ಡಿಪಡಿಸುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಆರೋಪಿಸಿದರು.

‘ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು, ಜಿಲ್ಲೆಯಲ್ಲಿ ರೋಗ ದಿನೇ ದಿನೇ ಜಾಸ್ತಿಯಾಗುತ್ತಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು. ಕುಡಿಯುವ ನೀರು ಹಾಗೂ ವಿದ್ಯುತ್‌ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.