ADVERTISEMENT

ಜಾತಿ ಕಂದಕ ನಿವಾರಣೆಗೆ ಬುದ್ಧ, ಬಸವರ ಹಾದಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:20 IST
Last Updated 14 ಸೆಪ್ಟೆಂಬರ್ 2017, 9:20 IST

ಕೋಲಾರ: ‘ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಹಾದಿಯಲ್ಲಿ ಸಾಗಿದರೆ ಮಾತ್ರ ಜಾತಿಯ ಕಂದಕ ನಿವಾರಣೆಯಾಗುತ್ತದೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು. ಜಿಲ್ಲಾಡಳಿತವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ನೀಡಿದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿ ನೀಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ದೇಶದಲ್ಲೇ ಅತಿ ಹೆಚ್ಚು ವಸತಿ ಶಾಲೆಗಳನ್ನು ರಾಜ್ಯದಲ್ಲಿ ತೆರೆದಿದೆ. ವಿದ್ಯಾರ್ಥಿಗಳು ಈ ಶಾಲೆಗಳ ಸದುಪಯೋಗ ಪಡೆದು ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ಭೇದವನ್ನು ತೊಲಗಿಸಬೇಕು ಎಂದು ಕರೆ ನೀಡಿದರು.

ತನ್ನಿಂದ ಯಾದವ ಸಮುದಾಯಕ್ಕೆ ಹೆಚ್ಚಿನ ಕೆಲಸ ಮಾಡಲು ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಆಡಳಿತ ನೀಡಿರುವುದರಿಂದ ಮುಂದಿನ ಬಾರಿಯೂ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಚರ್ಚಿಸುತ್ತೇನೆ: ಶಾಸಕ ವರ್ತೂರು ಪ್ರಕಾಶ್ ಮಾತನಾಡಿ, ‘ತಬ್ಬಲಿಯಾಗಿರುವ ಯಾದವ ಸಮುದಾಯಕ್ಕೆ ರಾಜ್ಯ ಮಟ್ಟದಲ್ಲಿ ಮನ್ನಣೆ ನೀಡುವಂತೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಯಾದವ ಸಮಾಜದ ಸಮಸ್ಯೆಗಳ ಅರಿವಿರುವ ಗೋಕುಲ್‌ ನಾರಾಯಣಸ್ವಾಮಿ ಅವರಿಗೆ ಶಾಸನಸಭೆಯ ಸ್ಥಾನಮಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ನನ್ನದು ಮತ್ತು ಕೆ.ಎಚ್.ಮುನಿಯಪ್ಪರದು ತಂದೆ ಮಗನ ಸಂಬಂಧ. ಮುಂದಿನ 20 ವರ್ಷ ಚುನಾವಣೆಯಲ್ಲಿ ನಮ್ಮಿಬ್ಬರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇದೆ. ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲು ಆಗುವುದಿಲ್ಲ’ ಎಂದರು.
ಶಿಕ್ಷಣದಿಂದ ಮಾತ್ರ ಆರ್ಥಿಕ ಹಾಗೂ ರಾಜಕೀಯ ಶಕ್ತಿ ಪಡೆಯಲು ಸಾಧ್ಯ. ಯಾದವ ಜನಾಂಗದವರು ಐಎಎಸ್, ಕೆಎಎಸ್ ಅಧಿಕಾರಿಗಳಾಗಬೇಕು. ರಾಜ್ಯಕ್ಕೆ ಮಾದರಿಯಾಗುವಂತೆ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನ ಕಟ್ಟಿರುವ ಯಾದವ ಜನಾಂಗವು ಸದಾ ಒಗ್ಗಟ್ಟಿನಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾಡಳಿತ ವಿಫಲ: ‘ಯಾದವ ಸಮುದಾಯವು ಅಲೆಮಾರಿ ಹಾಗೂ ಅರೆ ಅಲೆಮಾರಿ ರೂಪ ಹೊಂದಿದ್ದು, ಪ್ರವರ್ಗ 1ಕ್ಕೆ ಸೇರಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯದ ಅಭಿವೃದ್ಧಿಗೆ ₹ 100 ಕೋಟಿ ಬಿಡುಗಡೆ ಮಾಡಿದ್ದರೂ ಜಿಲ್ಲಾಡಳಿತವು ಜನಾಂಗದವರಿಗೆ ಸವಲತ್ತು ತಲುಪಿಸಲು ವಿಫಲವಾಗಿದೆ’ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಗೋಕುಲ್‌ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಯಾದವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಸಿ.ಶ್ರೀನಿವಾಸಯ್ಯ ಮಾತನಾಡಿ, ‘ಜನಾಂಗದ ಸಂಘಟನೆ ಕೃಷ್ಣ ಜನ್ಮಾಷ್ಟಮಿಗೆ ಮಾತ್ರ ಸೀಮಿತವಾಗಬಾರದು. ಪ್ರವರ್ಗ 1ರ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಸಲಹೆ ನೀಡಿದರು.

ಪಲ್ಲಕ್ಕಿ ಮೆರವಣಿಗೆ: ಯಾದವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಟೇಕಲ್‌ ವೃತ್ತದಿಂದ ಟಿ.ಚನ್ನಯ್ಯ ರಂಗಮಂದಿರದವರೆಗೆ ಶ್ರೀಕೃಷ್ಣನ ಭಾವಚಿತ್ರಗಳ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ನಗರಸಭೆ ಅಧ್ಯಕ್ಷ ಮಹಾಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಎಂ.ವೆಂಕಟರಮಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.