ADVERTISEMENT

ಜಾತಿ ಪ್ರಮಾಣಪತ್ರ ನೀಡಲು ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಬುಡ್ಗ ಜನಾಂಗದ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:21 IST
Last Updated 13 ಜುಲೈ 2017, 10:21 IST

ಕೋಲಾರ: ಬುಡ್ಗ ಜಂಗಮ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ಕೊಡುವಂತೆ ಒತ್ತಾಯಿಸಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಮುದಾಯದ ವಿದ್ಯಾರ್ಥಿಗಳೊಂದಿಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

ಜಾತಿ ಪ್ರಮಾಣಪತ್ರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2015ರಲ್ಲಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಅವರು ಜಾತಿ ಪ್ರಮಾಣಪತ್ರ ಕೊಡುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಕೃಷ್ಣಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿ ಬುಡ್ಗ ಜಂಗಮ ಜಾತಿಯ ಜನಸಂಖ್ಯೆ ಸುಮಾರು 20 ಸಾವಿರ ಇದೆ. ಜನಾಂಗದ 3 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಜಾತಿ ಪ್ರಮಾಣಪತ್ರ ಇಲ್ಲದೆ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಹಾಗೂ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಈ ಹಿಂದೆ ಜನಾಂಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ತಾಲ್ಲೂಕು ಕಚೇರಿಗಳಲ್ಲಿ ಬುಡ್ಗ ಜಂಗಮ ಜಾತಿ ಪ್ರಮಾಣಪತ್ರ ಕೊಡಲಾಗುತ್ತಿತ್ತು. ಆದರೆ, ಯಾರೋ ಮಾಡಿದ ತಪ್ಪಿಗೆ ಅಧಿಕಾರಿಗಳು ಇಡೀ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಕೊಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುವ ಅನಿವಾರ್ಯ ಎದುರಾಗಿದೆ’ ಎಂದು ಅಳಲು ತೋಡಿಕೊಂಡರು.

ಅಲೆದಾಟ ತಪ್ಪಿಲ್ಲ: ಕಂದಾಯ ನಿರೀಕ್ಷಕರು ನಗರ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟು ಸಮೀಕ್ಷೆ ಮಾಡಿ ಬುಡ್ಗ ಜಂಗಮ ಸಮುದಾಯಕ್ಕೆ ಸೇರಿದವರೆಂದು ದೃಢೀಕರಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಬಳಿ ಮಾಹಿತಿ ಇದ್ದರೂ ಅಲೆದಾಟ ತಪ್ಪಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಧರಣಿನಿರತರು ಆರೋಪಿಸಿದರು.

ಯಾವ ಸಮುದಾಯದವರೂ ಮಾಡದ ತಪ್ಪನ್ನು ಬುಡ್ಗ ಜಂಗಮ ಜನಾಂಗದವರು ಮಾಡಿದ್ದಾರೆಂದು ಅಧಿಕಾರಿಗಳು ಭಾವಿಸಿದ್ದಾರೆ. ಕನಿಷ್ಠ ಆ ತಪ್ಪಾದಾರೂ ಏನು ಎಂಬುದನ್ನು ತಿಳಿಸಿದರೆ ಸರಿಪಡಿಸಿಕೊಳ್ಳುತ್ತೇವೆ. ಅಧಿಕಾರಿಗಳು ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ಉದ್ದೇಶಕ್ಕಾದರೂ ಜಾತಿ ಪ್ರಮಾಣಪತ್ರ ಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅರ್ಜುನಪ್ಪ, ಪದಾಧಿಕಾರಿಗಳಾದ ಕೆ.ಎಸ್. ನಾಗರಾಜ್, ವೆಂಕಟೇಶಪ್ಪ, ಕೃಷ್ಣಪ್ಪ, ವೆಂಕಟರವಣಪ್ಪ, ಗಂಗಪ್ಪ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.