ADVERTISEMENT

ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟ

ತೊಪ್ಪನಹಳ್ಳಿ ಬಳಿ ಗೋಶಾಲೆ ಉದ್ಘಾಟಿಸಿದ ಶಾಸಕ ವರ್ತೂರು ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 5:34 IST
Last Updated 25 ಮಾರ್ಚ್ 2017, 5:34 IST

ಬಂಗಾರಪೇಟೆ: ಮೇವು ನೀರು ಸಿಗದೆ ಮೂಕವೇದನೆ ಅನುಭವಿಸುತ್ತಿರುವ ಜಾನುವಾರುಗಳಿಗೆ ಇಲ್ಲಿನ ಗೋಶಾಲೆ ವರದಾನವಾಗಲಿದೆ ಎಂದು ಕೋಲಾರ ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

ತಾಲ್ಲೂಕಿನ ತೊಪ್ಪನಹಳ್ಳಿ ಬಳಿ ಶುಕ್ರವಾರ ಗ್ರಾಮದ ಮಂಜುನಾಥ್‌ ಎಂಬುವವರು ನಿರ್ಮಿಸಿರುವ ಆಂಜನೇಯ ಸ್ವಾಮಿ ಗೋಶಾಲೆ ಉದ್ಘಾಟಿಸಿ  ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಬರ ಆವರಿಸಿದೆ. ಕೆರೆ, ಕುಂಟೆಗಳು ಬತ್ತಿಹೋಗಿದ್ದು ಜಾನುವಾರುಗಳಿಗೆ ಮೇವು, ನೀರು ಒದಗಿಸುವುದು ಕಷ್ಟದ ಕೆಲಸ ಎಂದರು.

ಕೆಲವೆಡೆ ನೀರು ಸಿಗುವುದೇ ಕಷ್ಟ. ಆದರೆ ಇಲ್ಲಿ 30 ಅಡಿ ಆಳದಲ್ಲಿಯೇ ನೀರು ಪುಟಿಯುತ್ತಿರುವುದು ವಿಶೇಷ. ಗೋವಿನ ರಕ್ಷಣೆಗೆ ದೇವರಿದ್ದಾರೆ ಎನ್ನುವುದಕ್ಕೆ ಗ್ರಾಮವೇ ಸಾಕ್ಷಿ. ಪ್ರಸ್ತುತ 65 ಹಸುಗಳಿದ್ದು, ಮುಂದೆ 500 ಹಸುಗಳಿಗೆ ಆಶ್ರಯ ನೀಡುವುದು ಮಂಜುನಾಥ್‌ ಅವರ ಆಶಯ ಎಂದು ತಿಳಿಸಿದರು.

ದಶಕದಿಂದ ಬರ ಆವರಿಸಿರುವ ಜಿಲ್ಲೆಯಲ್ಲಿ ಗೋಶಾಲೆ ನಿರ್ವಹಣೆ ಮಾಡುವುದು ಸರ್ಕಾರಕ್ಕೆ ಸವಾಲು. ಇಂಥ ಸನ್ನಿವೇಶದಲ್ಲಿ ಗೋಶಾಲೆ ಆರಂಭಿಸಿ, ಮೇವು, ನೀರು ಒದಗಿಸುವ ಮಂಜುನಾಥ್‌ ಅವರ ಸೇವೆ ಮೆಚ್ಚುವಂತದ್ದು  ಎಂದು ತಿಳಿಸಿದರು.

ಗೋ ಶಾಲೆಗೆ ಸರ್ಕಾರದಿಂದ ದೊರೆಯು ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಜತೆಗೆ ವೈಯುಕ್ತಿಕವಾಗಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು 

ಗೋಶಾಲೆ ಅಧ್ಯಕ್ಷ ಬಿ.ಮಂಜುನಾಥ್‌, ಕಾರ್ಯದರ್ಶಿ ಬ್ರೌನಿ ಮಂಜುನಾಥ್, ಖಜಾಂಚಿ ಭಾನು ಸೈಮನ್‌, ನಿರ್ದೇಶಕರಾದ ಎಂ.ಸುಬ್ರಮಣಿ, ಎಂ.ಮಂಜುನಾಥ, ಮುಖಂಡರಾದ ಜ್ಯೋತೇನಹಳ್ಳಿ ರಾಮಣ್ಣ, ಸಿ.ಎಂ.ಅಮರೇಶ್, ಎಲ್.ರಾಮಕೃಷ್ಣಪ್ಪ, ಅಪ್ಪೇಗೌಡ,  ಶ್ರೀನಿವಾಸಗೌಡ, ಸದಾ, ವೆಂಕಟೇಶಗೌಡ, ಸುದರ್ಶನ್‌ ರೆಡ್ಡಿ, ವಿಜಯಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.