ADVERTISEMENT

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರ

ಪೊಲೀಸ್‌ ಗನ್‌ಮನ್‌ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಯ ಬಂಡಲ್‌ಗಳ ರವಾನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 8:50 IST
Last Updated 10 ಮಾರ್ಚ್ 2017, 8:50 IST

ಕೋಲಾರ: ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಜೀವಶಾಸ್ತ್ರ ಹಾಗೂ ಇತಿಹಾಸ ವಿಷಯಗಳ ಪರೀಕ್ಷೆಯು ಗುರುವಾರ ಸುಸೂತ್ರವಾಗಿ ನಡೆಯಿತು.

‘ಪರೀಕ್ಷೆಗೆ 722 ವಿದ್ಯಾರ್ಥಿಗಳು ಗೈರಾಗಿದ್ದು, ಯಾವುದೇ ಪರೀಕ್ಷಾ ಅಕ್ರಮದ ವರದಿಯಾಗಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಕೆ.ಪಾಪಣ್ಣ ತಿಳಿಸಿದ್ದಾರೆ.

ಜೀವಶಾಸ್ತ್ರ ವಿಷಯಕ್ಕೆ ಹೊಸ ಪಠ್ಯಕ್ರಮದಡಿ ನೋಂದಾಯಿತರಾಗಿದ್ದ 4,231 ವಿದ್ಯಾರ್ಥಿಗಳ ಪೈಕಿ 4,119 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 112 ಮಂದಿ ಗೈರಾಗಿದ್ದಾರೆ. ಅದೇ ರೀತಿ ಹಳೆ ಪಠ್ಯಕ್ರಮದಡಿ ನೋಂದಾಯಿಸಿದ್ದ 35 ವಿದ್ಯಾರ್ಥಿಗಳಲ್ಲಿ 11 ಮಂದಿ ಗೈರಾಗಿದ್ದಾರೆ ಎಂದು ಹೇಳಿದ್ದಾರೆ.

ಇತಿಹಾಸ ವಿಷಯದ ಹೊಸ ಪಠ್ಯಕ್ರಮದ ಪರೀಕ್ಷೆಗೆ 8,293 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಈ ಪೈಕಿ 7,738 ಮಂದಿ ಪರೀಕ್ಷೆಗೆ ಹಾಜರಾಗಿ 555 ಮಂದಿ ಗೈರಾಗಿದ್ದಾರೆ. ಹಳೆ ಪಠ್ಯಕ್ರಮದ ಪರೀಕ್ಷೆಗೆ ನೋಂದಾಯಿಸಿದ್ದ 117 ವಿದ್ಯಾರ್ಥಿಗಳಲ್ಲಿ 44 ಮಂದಿ ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸ್‌ ಭದ್ರತೆ: ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ಸರ್ಕಾರದ ಸೂಚನೆಯಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತವು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಗನ್‌ಮನ್‌ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಯ ಬಂಡಲ್‌ಗಳನ್ನು ರವಾನಿಸಿತು.

ಮಾರ್ಗಾಧಿಕಾರಿಗಳ ತಂಡವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಿಲ್ಲಾ ಖಜಾನೆಯಿಂದ ವಿವಿಧ ತಾಲ್ಲೂಕುಗಳ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಸಾಗಿಸಿತು.

ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷಾ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT