ADVERTISEMENT

ಜಿಲ್ಲೆಯಾದ್ಯಂತ ಭರ್ಜರಿ ಮಳೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 9:58 IST
Last Updated 6 ಅಕ್ಟೋಬರ್ 2015, 9:58 IST

ಮಧುಗಿರಿ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಸುರಿದ ಭಾರಿ ಮಳೆಗೆ ಕೆಲವು ಕೆರೆಗಳು ಕೋಡಿ ಬಿದ್ದು, ಹಲವು ಕೆರೆ, ಕುಂಟೆ ಮತ್ತು ಹಳ್ಳಗಳಲ್ಲಿ ನೀರು ಹರಿದಿದೆ.

ಭಾನುವಾರ ರಾತ್ರಿ 7ಕ್ಕೆ ಪ್ರಾರಂಭವಾದ ಮಳೆ 12ರ ವರೆಗೂ ಮಳೆ ಸುರಿಯಿತು. ಈ ಮಳೆಯಿಂದಾಗಿ ಕಚ್ಚಾಮನೆಗಳ ಛಾವಣಿ ಮತ್ತು ಗೋಡೆಗಳು ಭಾಗಶಃ ಕುಸಿದಿವೆ. ಕಸಬಾ 18, ದೊಡ್ಡೇರಿ 8, ಪುರವರ 4, ಐ.ಡಿ.ಹಳ್ಳಿ ಹೋಬಳಿಗಳಲ್ಲಿ 18 ಮನೆಯ ಗೋಡೆಗಳು ನೆಲಕ್ಕುರುಳಿವೆ.

ಪುರವರ 8, ಐ.ಡಿ.ಹಳ್ಳಿ 12, ಮಿಡಿಗೇಶಿ ಹೋಬಳಿ ಹನುಮಂತಪುರ ಕೆರೆ ಅಂಗಳದ ನೀರಕಲ್ಲು ಸರ್ವೇ ನಂಬರ್ 2.20, ಕಾರೇನಹಳ್ಳಿ 2.20 ಹಾಗೂ ನೇರೇಳೆಕೆರೆ ಸರ್ವೇ ನಂಬರ್ 230 ರಲ್ಲಿ 1 ಎಕರೆ ಭತ್ತ ಹಾಗೂ ವಿವಿಧ ಬೆಳೆಗಳು ನಾಶವಾಗಿವೆ.

ತುಂಬಿದ ಕೆರೆಗಳು: ಸಿದ್ದಾಪುರ, ಮರುವೇಕೆರೆ, ಮರಿತಿಮ್ಮನಹಳ್ಳಿ, ಬಸವನಹಳ್ಳಿಯ ಶೆಟ್ಲುಕೆರೆ, ಗುಡಿರೊಪ್ಪ ಕಾಲೊನಿಯ ಸುಂಕಮ್ಮನಕಟ್ಟೆ, ರಂಗಾಪುರ, ಗೂಬಲಗುಟ್ಟೆ ಹಳೇಕೆರೆ, ಕೆ.ಟಿ.ಹಳ್ಳಿ ಹೊಸಕೆರೆ, ರಂಗನಪಾಳ್ಯ, ಗರಣಿ ಕೆರೆ, ಹನುಮಂತಪುರ ಹಾಗೂ ಬಿದರೆ ಕೆರೆಗಳು ತುಂಬಿವೆ.

ಮಧುಗಿರಿ– ತುಮಕೂರು ಮಾರ್ಗ ಮಧ್ಯೆ ಕಾವಡಿಗರ ಪಾಳ್ಯದ ಸಮೀಪ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದ ಮೂಲಕ ಚಲಿಸುತ್ತಿದ್ದ ವಾಹನಗಳು ಚನ್ನರಾಯನದುರ್ಗದ ಮೂಲಕ ಸಂಚರಿಸಿದವು.

ಸಿದ್ದಾಪುರ ಕೆರೆ ಕೋಡಿ ಬಿದ್ದಿರುವುದರಿಂದ ಅಲ್ಲಿದ್ದ ಮೀನುಗಳು ಹಳ್ಳದಲ್ಲಿ ಬರುತ್ತಿವೆ. ಆದ್ದರಿಂದ ಕೆಲವರು ಬಲೆ ತಂದು, ಮೀನು ಹಿಡಿದರು.

ಮಧುಗಿರಿಯಲ್ಲಿ 132, ಬಡವನಹಳ್ಳಿ 40, ಮಿಡಿಗೇಶಿ 70, ಐ.ಡಿ.ಹಳ್ಳಿ 65, ಬ್ಯಾಲ್ಯ 82, ಕೊಡಿಗೇನಹಳ್ಳಿ 58 ಮಿಲೀ ಮೀಟರ್ ಮಳೆಯಾಗಿದೆ.

ಪಟ್ಟಣದ ಕೆ.ಆರ್.ಬಡಾವಣೆಯ ಎ.ಕೆ.ಕಾಲೊನಿ , ಕೊರಚರ ಕಾಲೊನಿ, ಭೋವಿ ಕಾಲೊನಿ, ಶನಿಮಹಾತ್ಮ ದೇಗುಲದ ರಸ್ತೆ, ರಾಘವೇಂದ್ರ ಕಾಲೊನಿ ಹಾಗೂ ಎಸ್.ಎಂ,ಕೃಷ್ಣ ಬಡಾವಣೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡೀ ನಿವಾಸಿಗಳು ಜಾಗರಣೆ ಮಾಡುವಂತಾಯಿತು.

18 ಸೆಂ.ಮೀ. ಮಳೆ
ತೋವಿನಕೆರೆ: ಇಲ್ಲಿನ ಮಳೆ ಮಾಪನ ಕೇಂದ್ರದಲ್ಲಿ ಭಾನುವಾರ ರಾತ್ರಿ 18.2 ಸೆಂ.ಮೀ. ಮಳೆ ಬಿದ್ದು, ಇತಿಹಾಸ ಸೃಷ್ಟಿಯಾಗಿದೆ.
ತುಮಕೂರು ತಾಲ್ಲೂಕು ಕೋರಾ ಹೋಬಳಿ ನಂದಿಹಳ್ಳಿಯ ಒದೇಕಾರ್ ಫಾರ್ಮ್‌ನಲ್ಲಿರುವ ಖಾಸಗಿ ಮಾಪನ ಕೇಂದ್ರದಲ್ಲಿ 15.2 ಸೆಂ.ಮೀ. ಮಳೆ ದಾಖಲಾಗಿದೆ.

ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೆಕೆರೆಯು ಭಾನುವಾರ ರಾತ್ರಿಯ ಮಳೆಗೆ ಕೋಡಿ ಬಿದ್ದಿದೆ. ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿನ ಕಟ್ಟೆ, ರಸ್ತೆ,. ಹಳ್ಳಗಳು, ಜಮೀನುಗಳಲ್ಲಿ ದಿನ ಪೂರ್ತಿ ನೀರು ಹರಿದು, ತಾತ್ಕಾಲಿಕವಾಗಿ ಮಲೆನಾಡಿನ ಸೊಬಗು ಸೃಷ್ಟಿಸಿತ್ತು.

ಅನೇಕ ವರ್ಷಗಳಿಂದ ಮಳೆ ಸರಿಯಾಗಿ ಬರದೆ, ರೈತರು ತಮ್ಮ ಜಮೀನಿನಲ್ಲಿದ್ದ ಹಳ್ಳ– ಕಟ್ಟೆಗಳನ್ನು ಮುಚ್ಚಿದ್ದರು. ಭಾನುವಾರ ರಾತ್ರಿ ಬಿದ್ದ ಮಳೆಗೆ ನೀರು ಮನೆ, ಜಮೀನಿಗೆ ನುಗ್ಗಿ ನಷ್ಟ ಉಂಟಾಗಿದೆ.

ಸಮೀಪದ ಗಾಣಿಗುಂಟೆ ಕೆರೆಯ ಏರಿಯಲ್ಲಿ ಸೋಮವಾರ ಮುಂಜಾನೆ ಮಂಗೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿದೆ.

ಜಲಾವೃತ
ಕುಣಿಗಲ್: ತಾಲ್ಲೂಕಿನಲ್ಲಿ ಭಾನುವಾರ ಸರಾಸರಿ 61 ಮಿ.ಮೀ ಮಳೆಯಾಗಿದೆ.
ಪಟ್ಟಣದ ಹೌಸಿಂಗ್ ಬೋರ್ಡ್‌ ಕಾಲೊನಿ ಮನೆಯೊಂದು ಜಲಾವೃತವಾದರೆ, ಕೋಟೆ ಪ್ರದೇಶದಲ್ಲಿ ಮನೆ ಕುಸಿದಿದೆ. ಒಳಚರಂಡಿ ಕಾಮಗಾರಿ ಕಾರಣ ಬಹುತೇಕ ರಸ್ತೆಗಳು ಕೆಸರಿನ ಗುಂಡಿಯಂತಾಗಿವೆ.

ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣ ಮಳೆ ನೀರು ದೊಡ್ಡಕೆರೆ ಸೇರುವ ಮೊದಲು ಹೌಸಿಂಗ್ ಬೋರ್ಡ್‌ನ ಕೆಳ ಭಾಗದ ಮನೆಗಳಿಗೆ ನುಗ್ಗುತ್ತದೆ.

ಸ್ಟೆಲ್ಲಾ ಮೇರಿಸ್ ಶಾಲೆ ಆವರಣ ಸುತ್ತಮುತ್ತಲ ಜಾಗಗಳು ಜಲಾವೃತವಾಗಿವೆ. ಹೌಸಿಂಗ್ ಬೋರ್ಡ್‌ ಕಾಲೊನಿಯ ಸಿಂಗಾರಮ್ಮ ಎಂಬುವ ಮನೆ ಜಲಾವೃತವಾಗಿದೆ. ಕೋಟೆ ಪ್ರದೇಶದಲ್ಲಿ ರಾಮು ಎಂಬುವವರ ಮನೆ ಕುಸಿದಿದೆ. ಬಾಡಿಗೆಗೆ ಇದ್ದ ಹರೀಶ್ ಮತ್ತು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.