ADVERTISEMENT

ಜೆಡಿಎಸ್‌– ಶಾಸಕ ಬೆಂಬಲಿಗರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:43 IST
Last Updated 22 ಜೂನ್ 2017, 9:43 IST
ಕೋಲಾರ ನಗರ ಪೊಲೀಸ್‌ ಠಾಣೆ ಎದುರು ಬುಧವಾರ ಜೆಡಿಎಸ್‌ ಮುಖಂಡರು ಹಾಗೂ ಶಾಸಕ ವರ್ತೂರು ಪ್ರಕಾಶ್‌ ಬಣದ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು
ಕೋಲಾರ ನಗರ ಪೊಲೀಸ್‌ ಠಾಣೆ ಎದುರು ಬುಧವಾರ ಜೆಡಿಎಸ್‌ ಮುಖಂಡರು ಹಾಗೂ ಶಾಸಕ ವರ್ತೂರು ಪ್ರಕಾಶ್‌ ಬಣದ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು   

ಕೋಲಾರ: ನಗರದ 21ನೇ ವಾರ್ಡ್‌ನ ಉಪ ಚುನಾವಣೆ ವಿಚಾರದಲ್ಲಿ ಜೆಡಿಎಸ್‌ ಮತ್ತು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಬಣದ ಸದಸ್ಯರ ನಡುವೆ ಪೊಲೀಸ್‌ ಠಾಣೆ ಎದುರೇ ಬುಧವಾರ ಸಂಜೆ ಜಟಾಪಟಿ ನಡೆದಿದ್ದು, ಜೆಡಿಎಸ್‌ ಪಾಳಯದ ನಾಲ್ಕು ಮಂದಿ ಸದಸ್ಯರು ಗಾಯಗೊಂಡಿದ್ದಾರೆ.

21ನೇ ವಾರ್ಡ್‌ನ ಹಿಂದಿನ ಸದಸ್ಯ ಮುನೇಶ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಜೆಡಿಎಸ್‌ ಪಾಳಯದಿಂದ ಮೋಹನ್‌ ಪ್ರಕಾಶ್‌ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಶಾಸಕ ವರ್ತೂರು ಪ್ರಕಾಶ್‌ ಬಣದಿಂದ ರಮೇಶ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್‌ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಮೋಹನ್‌ ಪ್ರಕಾಶ್ ಪರ ವಾರ್ಡ್‌ನಲ್ಲಿ ಪ್ರಚಾರ ನಡೆಸಲು ಹೋಗಿದ್ದಾಗ ಶಾಸಕರ ಬೆಂಬಲಿಗರು ಪ್ರಚಾರಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಎರಡೂ ಗುಂಪುಗಳ ನಡುವೆ ಪರಸ್ಪರ ವಾಗ್ವಾದ ನಡೆದು ಜಗಳವಾಗಿದೆ.

ADVERTISEMENT

ಬಳಿಕ ಶಾಸಕರ ಬೆಂಬಲಿಗರು ಶಾರದಾ ಚಿತ್ರಮಂದಿರ ರಸ್ತೆಯಲ್ಲಿ ನಗರಸಭೆ ಸದಸ್ಯ ಜೆಡಿಎಸ್‌ನ ಬಿ.ಎಂ. ಮುಬಾರಕ್‌ರ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಮುಬಾರಕ್‌ ಜತೆಗಿದ್ದ ಪಕ್ಷದ ಮುಖಂಡರಾದ ವಿಶ್ವನಾಥ್‌, ನಾಗಭೂಷಣ್‌ ಮತ್ತು ರಾಜು ಎಂಬುವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ‘21ನೇ ವಾರ್ಡ್‌ಗೆ ಚುನಾವಣೆ ನಡೆಸಲು ಯಾರಿಗೂ ಆಸಕ್ತಿ ಇಲ್ಲ.

ಎಲ್ಲರೂ ರಮೇಶ್ ಅವರನ್ನು ಅವಿರೋಧ ಆಯ್ಕೆ ಮಾಡಲು ಮುಂದಾಗಿದ್ದಾರೆ. ಆದರೆ, ನೀವು ಇದಕ್ಕೆ ಅವಕಾಶ ಕೊಡದೆ ಚುನಾವಣೆ ನಡೆಸುತ್ತಿದ್ದೀರಿ. ಚುನಾವಣಾ ಪ್ರಚಾರ ಹೇಗೆ ನಡೆಸುತ್ತೀರಿ ನೋಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಇದರಿಂದ ಕೋಪಗೊಂಡ ಮುಬಾರಕ್‌ ಮತ್ತು ಮುಖಂಡರು ದೂರು ಕೊಡಲು ನಗರ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಅವರನ್ನು ಹಿಂಬಾಲಿಸಿದ ಶಾಸಕರ ಬೆಂಬಲಿಗರು ದೂರು ಕೊಡದಂತೆ ತಡೆಯೊಡ್ಡಿದ್ದಾರೆ. ಇದರಿಂದ ಠಾಣೆ ಬಾಗಿಲಲ್ಲೇ ಎರಡು ಗುಂಪುಗಳ ನಡುವ ಘರ್ಷಣೆ ನಡೆದಿದೆ. ಈ ವೇಳೆ ಶಾಸಕರ ಬಣದ ಅಭ್ಯರ್ಥಿ ರಮೇಶ್‌ ಮತ್ತು ಬೆಂಬಲಿಗರು ಜೆಡಿಎಸ್‌ನ ವಿಶ್ವನಾಥ್‌ರನ್ನು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿರಿಯ ಪೊಲೀಸ್‌ ಅಧಿಕಾರಿಗಳು ಉಭಯ ಗುಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

* * 

ಘಟನೆ ಸಂಬಂಧ ಜೆಡಿಎಸ್‌ ಮತ್ತು ಶಾಸಕರ ಬೆಂಬಲಿಗರು ದೂರು ಹಾಗೂ ಪ್ರತಿದೂರು ಕೊಟ್ಟಿದ್ದಾರೆ. 13 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ರೋಹಿಣಿ ಕಟೋಚ್‌ ಸೆಪಟ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.