ADVERTISEMENT

ಟಿಪ್ಪು ದೇಶಭಕ್ತಿ ಪ್ರಶ್ನಾತೀತ

ಬಿಜೆಪಿ ಮುಖಂಡರ ವಿರುದ್ಧ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2016, 7:27 IST
Last Updated 11 ನವೆಂಬರ್ 2016, 7:27 IST
ಕೋಲಾರದಲ್ಲಿ ಗುರುವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು
ಕೋಲಾರದಲ್ಲಿ ಗುರುವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು   
ಕೋಲಾರ: ‘ಟಿಪ್ಪು ಸುಲ್ತಾನ್‌ನನ್ನು ದೇಶದ್ರೋಹಿ ಎನ್ನುವುದು ಅವಿವೇಕದ ಪರಮಾವಧಿ. ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಟಿಪ್ಪುವಿನ ದೇಶಭಕ್ತಿ ಪ್ರಶ್ನಾತೀತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಪ್ರತಿಪಾದಿಸಿದರು.
 
ಜಿಲ್ಲಾಡಳಿತವು ನಗರದ ಆಲ್‌ ಅಮೀನ್‌ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
 
ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಭಾರತದ ಬಹುತೇಕ ರಾಜರು ಬ್ರಿಟಿಷರ ಬೂಟು ನೆಕ್ಕಿ ತಮ್ಮ ಸಾಮ್ರಾಜ್ಯ ಉಳಿಸಿಕೊಂಡರು. ಟಿಪ್ಪು ಸುಲ್ತಾನ್‌ ಆ ರೀತಿ ಮಾಡಲಿಲ್ಲ. ಫ್ರಾನ್ಸ್‌ ಚಕ್ರವರ್ತಿ ನೆಪೊಲಿಯನ್‌ ಜತೆ ಸಹಭಾಗಿತ್ವ ಇಟ್ಟುಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ. ಆದರೆ, ಕೆಲ ರಾಜರು ಬ್ರಿಟಿಷರ ಜತೆ ಕೈಜೋಡಿಸಿ ಟಿಪ್ಪು ವಿರುದ್ಧ ಮೀರ್‌ ಸಾದಿಕ್‌ ಕೆಲಸ ಮಾಡಿದರು ಎಂದು ಹೇಳಿದರು.
 
ಪ್ರಸ್ತುತ ಸಮಾಜದಲ್ಲಿ ಟಿಪ್ಪುನಂತಹ ವ್ಯಕ್ತಿಗಳು ಇದ್ದಾರೆ. ಅದೇ ರೀತಿ ಮೀರ್‌ ಸಾದಿಕ್‌ಗಳು ಇದ್ದಾರೆ. ಜನ ಈ ಬಗ್ಗೆ ಜಾಗೃತರಾಗಬೇಕು. ಟಿಪ್ಪು ತೋರಿಸಿದ ಸ್ವಾಭಿಮಾನ ಹಾಗೂ ಹೋರಾಟದ ಹಾದಿಯಲ್ಲಿ ಜನ ಸಾಗಬೇಕು. ಎಲ್ಲಾ ರಾಜರು ಯುದ್ಧದಲ್ಲಿ ಸೈನಿಕರನ್ನು ಮುಂದೆ ಬಿಟ್ಟು ಸ್ವರಕ್ಷಣೆ ಮಾಡಿಕೊಂಡರು. ಆದರೆ, ಟಿಪ್ಪು ಯುದ್ಧದ ಮುಂದಾಳತ್ವ ವಹಿಸಿ ರಣರಂಗದಲ್ಲಿ ಮುಂದೆ ನಿಂತು ಹೋರಾಡಿದ ಎಂದು ಬಣ್ಣಿಸಿದರು.
 
ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೋಮುವಾದಿಗಳು ದೇಶದ ಚರಿತ್ರೆಯನ್ನು ಸರಿಯಾಗಿ ಓದಲಿ. ಚರಿತ್ರೆ ಓದಲು ಅವರಿಗೆ ಕಣ್ಣು ಕಾಣದಿದ್ದರೆ ಮೊದಲು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಲಿ. ದೇವರನ್ನು ಅಳಿಸಿದರೆ ಪ್ರಾರ್ಥನೆ ಮಾಡಿ ಕ್ಷಮೆ ಕೇಳಬಹುದು. ಜನರನ್ನು ಅಳಿಸಿದರೆ ಒಳ್ಳೆಯದಾಗುವುದಿಲ್ಲ ಎಂದು ಬಿಜೆಪಿ ಮುಖಂಡರನ್ನು ಟೀಕಿಸಿದರು.
 
ಸಮಾಜದಲ್ಲಿ ಧರ್ಮಗಳ ನಡುವೆ ಹಾಗೂ ಮನಸುಗಳ ಮಧ್ಯೆ ಗೋಡೆ ಕಟ್ಟಲಾಗಿದೆ. ಟಿಪ್ಪು ಸುಲ್ತಾನ್‌ ಜಾತ್ಯತೀತ ಮನೋಭಾವದ ಪ್ರತೀಕ. ಕೋಮುವಾದಿಗಳು ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮತ್ತು ಟಿಪ್ಪುವನ್ನು ಒಂದೇ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಕಿವಿಮಾತು ಹೇಳಿದರು.
 
ಮದುವೆ, ಆಹಾರ ಪದ್ಧತಿ, ಪ್ರಾರ್ಥನೆ ಸಲ್ಲಿಕೆಯು ಧಾರ್ಮಿಕ ವಿಚಾರಗಳು. ಇವುಗಳಲ್ಲಿ ಹಸ್ತಕ್ಷೇಪ ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಟಿಪ್ಪು ಜಯಂತಿ ವಿರೋಧಿಸುತ್ತಿರುವವರಿಗೆ ಮುಸ್ಲಿಂ ಸಮುದಾಯ ಹೆದರುವ ಅಗತ್ಯವಿಲ್ಲ. ಈ ಸಮುದಾಯದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಟಿಪ್ಪು ಜಯಂತಿ ವಿರೋಧಿಸುತ್ತಿರುವವರನ್ನು ಕ್ಷಮಿಸಿ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಕುಟುಕಿದರು.
 
ಗೊಂದಲ ಸೃಷ್ಟಿ: ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ‘ಬ್ರಿಟಿಷರನ್ನು ದೇಶದಿಂದ ಹೊರಗೋಡಿಸುವಲ್ಲಿ ಟಿಪ್ಪು ನಿರ್ಣಾಯಕ ಪಾತ್ರ ವಹಿಸಿದ. ಆದರೆ, ಕೆಲ ವ್ಯಕ್ತಿಗಳು ಚರಿತ್ರೆ ತಿಳಿಯದೆ ಬೇರೆ ಬೇರೆ ವಿಷಯ ಪ್ರಸ್ತಾಪಿಸಿ ಟಿಪ್ಪು ಬಗ್ಗೆ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಎಲ್ಲ ಧರ್ಮದವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಅಂಬೇಡ್ಕರ್‌ ಸಂವಿಧಾನದ ಮೂಲಕ ಎಲ್ಲಾ ವರ್ಗದ ಜನರಿಗೂ ಸಮಾನ ಹಕ್ಕು ಕೊಟ್ಟಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಹಿಂದೂ ಮುಸ್ಲಿಂರನ್ನು ಬೇರ್ಪಡಿಸಲು ಆಗುವುದಿಲ್ಲ. ಧರ್ಮ ಧರ್ಮಗಳ ನಡುವೆ ಕಲಹ ತರುವ ದುಷ್ಟ ಶಕ್ತಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
 
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಎಲ್ಲಾ ಧರ್ಮಗಳು ಒಟ್ಟಿಗೆ ಹೋಗಬೇಕು. ಟಿಪ್ಪು ಜಯಂತಿಗೆ ಕೆಲ ದುಷ್ಟ ಶಕ್ಷಿಗಳು ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಮುಸ್ಲಿಂ ಸಮುದಾಯ ನೊಂದುಕೊಳ್ಳಬಾರದು. ಟಿಪ್ಪು ಜಯಂತಿ ಆಚರಣೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸದಾ ಮುಸ್ಲಿಂರ ಬೆಂಬಲಕ್ಕಿದೆ. ಸಹೋದರ ಭಾವನೆ ಬೆಳೆಸಿಕೊಂಡು ಎಲ್ಲಾ ಧರ್ಮಗಳ ಜತೆ ವಿಶ್ವಾಸದಿಂದ ಬಾಳಿ ಎಂದು ಕಿವಿಮಾತು ಹೇಳಿದರು.
 
ದಲಿತ ಮುಖಂಡ ಪಂಡಿತ್‌ ಮುನಿವೆಂಕಟಪ್ಪ ಅವರು ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್‌ ಕುರಿತು ಉಪನ್ಯಾಸ ನೀಡಿದರು. ಟಿಪ್ಪು ಸುಲ್ತಾನ್‌ ಜೀವನ ಕುರಿತು ನಡೆಸಿದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಗೀತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಪ್ರಸಾದ್‌ಬಾಬು, ಸಲಾವುದ್ದೀನ್‌ ಬಾಬು, ಸಾದಿಕ್‌ ಪಾಷಾ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ಅಂಜುಮನ್‌ ಎ ಇಸ್ಲಾಮಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಜಮೀರ್‌ ಅಹಮ್ಮದ್‌ ಇದ್ದರು.
 
**
ಟಿಪ್ಪು ವೀರ ಸೇನಾನಿ
ಶ್ರೀನಿವಾಸಪುರ: ಟಿಪ್ಪು ಒಬ್ಬ ದೇಶಪ್ರೇಮಿಯಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ. ಎಲ್ಲ ಸಮುದಾಯದ ಜನರೂ ಅವರ ಸ್ಮರಣೆ ಮಾಡಬೇಕು. ಅವರ ಸಾಧನೆಗಳನ್ನು ಅರಿಯಬೇಕು ಎಂದು ಸ್ಥಳೀಯ ಜಾಮಿಯ ಮಸೀದಿಯ ಮುಖ್ಯಸ್ಥ ಮೆಹಮಾನ್‌ ರೆಹಮಾನ್‌ ಹೇಳಿದರು.
 
ತಾಲ್ಲೂಕು ಕಚೇರಿ ಎದುರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ, ಟಿಪ್ಪು ಜಯಂತಿ ಸಮಾರಂಭಲ್ಲಿ ಮಾತನಾಡಿ, ದೇಶದ ಒಳಿತಿಗಾಗಿ ತಮ್ಮ ಮಕ್ಕಳನ್ನು ಒತ್ತೆಯಿಟ್ಟ ಟಿಪ್ಪು ಸಮಾಜದ ಅಭಿವೃದ್ಧಿಗೆ ತಮ್ಮ ದೆ ಆದ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
 
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ.ರಾಘವೇಂದ್ರ ಟಿಪ್ಪುವಿನ ಜೀವನ ಸಾಧನೆ ಕುರಿತು ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅರುಣ ಜಗದೀಶ್‌ ಸಮಾರಂಭ ಉದ್ಘಾಟಿಸಿದರು. ತಹಶೀಲ್ದಾರ್‌ ರವಿ ಅಧ್ಯಕ್ಷತೆ ವಹಿಸಿದ್ದರು.
 
ಜಿಲ್ಲಾ ವಕ್ಫ್‌ ಮಂಡಳಿ ಸದಸ್ಯ ಷಬ್ಬೀರ್‌ ಅಹ್ಮದ್‌, ಮುಖಂಡರಾದ ಅನಿಸ್‌, ನೂರುಲ್ಲಾ ಖಾನ್‌, ಸತ್ತಾರ್‌ ಅನ್ದಾರಿ, ಜಾವಿದ್‌ ಅನ್ಸಾರಿ, ಮೆಹಬೂಬ್‌ ಷರೀಫ್‌, ಮುಕ್ತಿಯಾರ್‌ ಅಹ್ಮದ್‌, ಇಫ್ತಿಕಾರ್ ಅಹ್ಮದ್‌, ಅಬ್ದುಲ್‌ ಸತ್ತಾರ್‌, ಏಜಾಜ್‌ ಪಾಷಾ, ಅಕ್ಬರ್‌ ಷರೀಫ್‌, ಬಾಸಿತ್‌ ಖಾನ್‌, ರಿಯಾಜ್‌ ಷರೀಫ್‌, ನಯಾಜ್‌ ಷರೀಫ್‌, ಮಹಮದ್‌ ರಫಿ, ಆಸೀಪುಲ್ಲಾ, ಮಹಮದ್‌ ಅಲಿ, ಕೆ.ಕೆ.ಮಂಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿ.ಸುಗುಣ, ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಿಪಿಐ ಎಂ.ವೆಂಕಟರವಣಪ್ಪ ಇದ್ದರು. 
 
ರಕ್ತದಾನ ಶಿಬಿರ: ಮೊಹಲ್ಲಾ ಆಸ್ಪತ್ರೆಯಲ್ಲಿ ಟಿಪ್ಪು ಜಯಂತಿ ಅಂಗವಾಗಿ ಮುಸ್ಲಿಂ ಸಂಘಟನೆಗಳ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿ ಜಿ.ಶ್ರೀನಿವಾಸ್‌ ಶಿಬಿರವನ್ನು ಉದ್ಘಾಟಿಸಿದರು.
 
**
ಬಿಗಿ ಬಂದೋಬಸ್ತ್‌
ಟಿಪ್ಪು ಜಯಂತಿ ನಡೆದ ಆಲ್‌ ಅಮೀನ್‌ ಕಾಲೇಜು ಮೈದಾನದ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸುತ್ತಮುತ್ತಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಆ ಮಾರ್ಗವಾಗಿ ಬರುತ್ತಿದ್ದ ಪ್ರತಿ ವಾಹನ ಹಾಗೂ ವ್ಯಕ್ತಿಗಳನ್ನು ತಪಾಸಣೆ ಮಾಡಿದ ನಂತರವಷ್ಟೇ ಮುಂದೆ ಹೋಗಲು ಅವಕಾಶ ನೀಡಿದರು. ಮೈದಾನದಲ್ಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.