ADVERTISEMENT

ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ

ಆರ್‌ಟಿಇ ವಿದ್ಯಾರ್ಥಿಗಳ ಶುಲ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 7:45 IST
Last Updated 20 ಜನವರಿ 2017, 7:45 IST
ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ
ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ   

ಕೋಲಾರ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಪಾವತಿಸಬೇಕಿರುವ ಶುಲ್ಕದಲ್ಲಿ ಹೆಚ್ಚಿನ ಹಣವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಸದಸ್ಯರು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದರು.

ಜಿಲ್ಲೆಯ ಖಾಸಗಿ ಶಾಲೆಗಳು 2015–16ನೇ ಸಾಲಿನ ಆರ್‌ಟಿಇ ಶುಲ್ಕ ಪಡೆಯುವ ಸಲುವಾಗಿ ಶಿಕ್ಷಣ ಇಲಾಖೆಯ ಆನ್‌ಲೈನ್‌ ತಂತ್ರಾಂಶದಲ್ಲಿ ವಿವರ ಜೋಡಣೆ ಮಾಡಿವೆ. ಲೆಕ್ಕ ಪರಿಶೋಧನಾ ವರದಿ ಪ್ರಕಾರವೇ ಶಾಲೆಗಳು ಖರ್ಚು ವೆಚ್ಚ ತೋರಿಸಿವೆ. ಶಾಲೆಗಳಿಗೆ ನೀಡಬೇಕಾದ ಹಣದ ವಿವರವನ್ನು ಸರ್ಕಾರ ಇಲಾಖೆಯ ತಂತ್ರಾಂಶದಲ್ಲಿ ನಮೂದಿಸಿತ್ತು. ಆದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಾಲೆಗಳು ಸಲ್ಲಿಸಿದ ವಿವರವನ್ನು ಕಡೆಗಣಿಸಿ ಶುಲ್ಕ ಕಡಿತಗೊಳಿಸಿದ್ದಾರೆ ಎಂದು ದೂರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ‘ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡುತ್ತಿವೆ. ಸರ್ಕಾರ ಹಾಗೂ ನ್ಯಾಯಾಲಯದ ಆದೇಶಕ್ಕೆ ಮಣಿದು ಆರ್‌ಟಿಇ ಅಡಿ ಪ್ರತಿಭಾವಂತ ಬಡ ಮಕ್ಕಳಿಗೆ ಪ್ರವೇಶ ನೀಡಿವೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಆರ್‌ಟಿಇ ಮಕ್ಕಳಿಗೆ ಸಂಬಂಧಪಟ್ಟಂತೆ ಶೇ 25ರಷ್ಟು ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ’ ಎಂದರು.

ಶಿಕ್ಷಣ ಸಂಸ್ಥೆ ನಡೆಸುವುದು ಸಾಕಷ್ಟು ಕಷ್ಟ. ಇಂತಹ ಸಂದರ್ಭದಲ್ಲಿ ಆರ್‌ಟಿಇ ನಿಯಮಗಳಿಗೆ ಬದ್ಧವಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಆ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಬಿಡುಗಡೆ ಮಾಡುವುದಾಗಿ ಆರಂಭದಲ್ಲೇ ಹೇಳಿದೆ. ಆದರೆ, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ವೆಚ್ಚದ ಹಣ ಬಿಡುಗಡೆ ಮಾಡಿಲ್ಲ ಎಂದರು.

ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗೆ ತಲಾ ₹ 5,600 ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗೆ ₹ 11,488 ಬಿಡುಗಡೆ ಮಾಡುವುದಾಗಿ ಸರ್ಕಾರವೇ ಹೇಳಿತ್ತು. ಇಲಾಖೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಲೆಕ್ಕ ಪರಿಶೋಧನಾ ವರದಿಯ ಆಧಾರದಲ್ಲಿ ಹಣ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಶೇ 20ರಷ್ಟೂ ಹಣ ಸಿಗುತ್ತಿಲ್ಲ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ 83 ಶಾಲೆಗಳು ಆರ್‌ಟಿಇ ಅಡಿ 797 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿವೆ. ಇವರಿಗೆ ಇತರೆ ವಿದ್ಯಾರ್ಥಿಗಳಿಗೆ ಸಮನಾಗಿ ಶಿಕ್ಷಣ ನೀಡುತ್ತಿದ್ದೇವೆ. ಕ್ಷೇತ್ರ ಶಿಕ್ಷಣಾಧಿಕಾರಿಯು ಇಲ್ಲ ಸಲ್ಲದ ಕಾನೂನು ಹೇಳಿ ನಮ್ಮನ್ನು ದಿಕ್ಕು ತಪ್ಪಿಸಿ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ್ ಆರೋಪಿಸಿದರು.

ಕ್ರಮ ಕೈಗೊಳ್ಳುತ್ತೇವೆ: ಪ್ರತಿಭಟನಾಕಾರರನ್ನು ಭೇಟಿಯಾದ ಉಪ ನಿರ್ದೇಶಕ ಕೆ.ಜಿ.ರಂಗಯ್ಯ, ‘ಸರ್ಕಾರದ ನಿಯಮಾವಳಿ ಅನುಸಾರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಅನುದಾನ ಬಿಡುಗಡೆಯಲ್ಲಿ ಯಾವುದೇ ಪಕ್ಷಪಾತ ನಡೆಯದಂತೆ ಎಚ್ಚರ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ 278 ಶಾಲೆಗಳಲ್ಲಿ ಆರ್‌ಟಿಇ ಅಡಿ 2,652 ಮಕ್ಕಳು ಪ್ರವೇಶ ಪಡೆದಿದ್ದಾರೆ. ಬಂಗಾರಪೇಟೆಯ 45 ಶಾಲೆಗಳಲ್ಲಿ 486 ವಿದ್ಯಾರ್ಥಿಗಳು, ಕೆಜಿಎಫ್‌ನ 35 ಶಾಲೆಗಳಲ್ಲಿ 303, ಕೋಲಾರದ 83 ಶಾಲೆಗಳಲ್ಲಿ 797, ಮಾಲೂರಿನ 33 ಶಾಲೆಗಳಲ್ಲಿ 331, ಮುಳಬಾಗಿಲಿನ 42 ಶಾಲೆಗಳಲ್ಲಿ305 ಮತ್ತು ಶ್ರೀನಿವಾಸಪುರದ 40 ಶಾಲೆಗಳಲ್ಲಿ 430 ಮಕ್ಕಳು ದಾಖಲಾಗಿದ್ದಾರೆ’ ಎಂದು ಇಲಾಖೆಯ ನೋಡಲ್‌ ಅಧಿಕಾರಿ ಸಿ.ಆರ್.ಅಶೋಕ್ ಮಾಹಿತಿ ನೀಡಿದರು.

ಆರ್‌ಟಿಇ ಅಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಹಣ ಬಿಡುಗಡೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ, ದಾಖಲೆ ಪತ್ರಗಳು ಹೊಂದಾಣಿಕೆಯಾಗದ ಕಡತಗಳನ್ನು ಡಿಡಿಪಿಐ ಕಚೇರಿಗೆ ಕಳುಹಿಸುತ್ತಿದ್ದಾರೆ. ಈ ಕಡತಗಳನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಸಂಘದ ಸದಸ್ಯರಾದ ಜಗದೀಶ್, ಗೋಪಾಲಪ್ಪ, ರಾಜೇಶ್‌ಸಿಂಗ್‌, ಸದಾನಂದ, ವರಲಕ್ಷ್ಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.