ADVERTISEMENT

‘ನಂದಿನಿ’ ಬ್ರ್ಯಾಂಡ್‌ ಹೆಸರಿನಲ್ಲಿ ಕಲಬೆರಕೆ ತುಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 8:45 IST
Last Updated 16 ಸೆಪ್ಟೆಂಬರ್ 2017, 8:45 IST

ಕೋಲಾರ: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಕಲಬೆರಕೆ ತುಪ್ಪ ತಯಾರಿಸುವ ಜಾಲ ಆಂಧ್ರಪ್ರದೇಶದಲ್ಲಿ ಸಕ್ರಿಯವಾಗಿರುವ ಬಗ್ಗೆ ಸುಳಿವು ಸಿಕ್ಕಿದ್ದು, ಈ ಸಂಬಂಧ ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡವೊಂದನ್ನು ಆಂಧ್ರಕ್ಕೆ ಕಳುಹಿಸಲು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ನಿರ್ಧರಿಸಿದೆ.

ಆಂಧ್ರಪ್ರದೇಶದ ವಿಜಯವಾಡ ಮತ್ತು ತಿರುಪತಿ, ತೆಲಂಗಾಣದ ಹೈದರಾಬಾದ್‌, ಕೇರಳದ ತ್ರಿಶೂರು, ಮಹಾರಾಷ್ಟ್ರದ ಮುಂಬೈ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಕೆಎಂಎಫ್‌ ಡಿಪೊಗಳಿದ್ದು, ಇಲ್ಲಿಗೆ ಪ್ರತಿನಿತ್ಯ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ.

ಅಲ್ಲಿನ ಸ್ಥಳೀಯ ಏಜೆನ್ಸಿಗಳು ಡಿಪೊಗಳಿಂದ ನಂದಿನಿ ಉತ್ಪನ್ನಗಳನ್ನು ಖರೀದಿಸಿ ದೇವಸ್ಥಾನಗಳು, ದೊಡ್ಡ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿವೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಾಯಿಕೊಂಡದ ಗಂಗಮ್ಮ ದೇವಸ್ಥಾನದ ಆಡಳಿತ ಮಂಡಳಿಯು ಸ್ಥಳೀಯ ಏಜೆನ್ಸಿಯಿಂದ ನಂದಿನಿ ತುಪ್ಪ ಖರೀದಿಸುತ್ತಿದ್ದು, ತುಪ್ಪದ ಗುಣಮಟ್ಟ ಕಳಪೆಯಾಗಿರುವ ಸಂಬಂಧ ಕೋಚಿಮುಲ್‌ಗೆ ದೂರು ಬಂದಿದೆ.

ADVERTISEMENT

ಲಡ್ಡುಗೆ ತುಪ್ಪ: ತಿರುಪತಿ ಬಳಿಯ ಬಾಯಿಕೊಂಡದ ಗಂಗಮ್ಮ ದೇವಾಲಯಕ್ಕೆ ಬರುವ ಭಕ್ತರಿಗೆ ಲಡ್ಡು ವಿತರಿಸಲಾಗುತ್ತದೆ. ದೇವಾಲಯ ಆಡಳಿತ ಮಂಡಳಿಯು ಲಡ್ಡು ತಯಾರಿಕೆಗೆ ಹಲವು ವರ್ಷಗಳಿಂದ ನಂದಿನಿ ತುಪ್ಪವನ್ನೇ ಬಳಸುತ್ತಿದೆ. ಸ್ಥಳೀಯ ಏಜೆನ್ಸಿಯವರು ಇತ್ತೀಚೆಗೆ ದೇವಾಲಯಕ್ಕೆ ಟಿನ್‌ಗಳಲ್ಲಿ ಸರಬರಾಜು ಮಾಡಿದ್ದ ತುಪ್ಪದ ಗುಣಮಟ್ಟ ಕಳಪೆಯಾಗಿರುವುದು ಗೊತ್ತಾಗಿದೆ.

ಈ ಸಂಬಂಧ ದೇವಾಲಯ ಸಿಬ್ಬಂದಿಯು ತುಪ್ಪ ಸರಬರಾಜು ಮಾಡಿದ್ದ ಪುಂಗನೂರಿನ ಏಜೆನ್ಸಿ ಪ್ರತಿನಿಧಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಕೊಟ್ಟಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಕೋಚಿಮುಲ್‌ಗೆ ದೂರು ಕೊಟ್ಟಿದ್ದಾರೆ. ನಂತರ ಅಪರಿಚಿತ ವ್ಯಕ್ತಿಗಳು ದೇವಾಲಯ ಸಿಬ್ಬಂದಿಗೆ ಕರೆ ಮಾಡಿ, ನಂದಿನಿ ತುಪ್ಪದ ಗುಣಮಟ್ಟ ಕಳಪೆಯಾಗಿರುವ ಸಂಗತಿಯನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಗೊತ್ತಾಗಿದೆ.

200 ಮೆಟ್ರಿಕ್‌ ಟನ್‌: ಕೋಚಿಮುಲ್‌ನಲ್ಲಿ ತಿಂಗಳಿಗೆ ಸುಮಾರು 200 ಮೆಟ್ರಿಕ್‌ ಟನ್‌ ತುಪ್ಪ ಉತ್ಪಾದಿಸಲಾಗುತ್ತಿದೆ. ಈ ಪೈಕಿ 20 ಮೆಟ್ರಿಕ್‌ ಟನ್‌ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾರಾಟವಾಗುತ್ತಿದೆ. ಉಳಿದ 180 ಮೆಟ್ರಿಕ್‌ ಟನ್‌ ತುಪ್ಪವನ್ನು ತಿರುಪತಿ, ವಿಜಯವಾಡ ಸೇರಿದಂತೆ ಕೆಎಂಎಫ್‌ನ ವಿವಿಧ ಡಿಪೊಗಳಿಗೆ ಕಳುಹಿಸಲಾಗುತ್ತಿದೆ.

ಏಜೆನ್ಸಿಯವರ ಕೈವಾಡ: ‘ತಿರುಪತಿ ಡಿಪೊದಿಂದ ಆಂಧ್ರಪ್ರದೇಶದ ವಿವಿಧೆಡೆಗೆ ನಂದಿನಿ ಉತ್ಪನ್ನಗಳು ಪೂರೈಕೆಯಾಗುತ್ತವೆ. ಆ ಡಿಪೊದಿಂದ ತುಪ್ಪದ ಟಿನ್‌ಗಳನ್ನು ಖರೀದಿಸಿದ ಏಜೆನ್ಸಿಯವರು ಅಸಲಿ ತುಪ್ಪವನ್ನು ಹೊರ ತೆಗೆದು ಕಳಪೆ ಗುಣಮಟ್ಟದ ತುಪ್ಪವನ್ನು ಟಿನ್‌ಗಳಿಗೆ ತುಂಬಿಸಿ ಮಾರಿರುವ ಸಾಧ್ಯತೆ ಇದೆ’ ಎಂದು ಕೋಚಿಮುಲ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಏಜೆನ್ಸಿಯವರು ಹಾಗೂ ಟೆಂಡರ್‌ದಾರರು ಈಗಾಗಲೇ ಬಳಕೆಯಾಗಿರುವ ಹಳೆಯ ನಂದಿನಿ ತುಪ್ಪದ ಟಿನ್‌ಗಳಿಗೆ ಸ್ಥಳೀಯವಾಗಿ ತಯಾರಿಸಿದ ತುಪ್ಪವನ್ನು ತುಂಬಿಸಿ ಮಾರಾಟ ಮಾಡಿರಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.