ADVERTISEMENT

ನಗರಸಭೆಯಿಂದ ಅಕ್ರಮ ಅಂಗಡಿ ತೆರವು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 6:31 IST
Last Updated 22 ಅಕ್ಟೋಬರ್ 2017, 6:31 IST

ಕೋಲಾರ: ನಗರಸಭೆಯ ವಾಣಿಜ್ಯ ಮಳಿಗೆ ಆವರಣದಲ್ಲಿ ಅಕ್ರಮವಾಗಿದ್ದ ಅಂಗಡಿಯನ್ನು ನಗರಸಭೆ ಅಧಿಕಾರಿಗಳು ಶನಿವಾರ ಸಂಜೆ ತೆರವುಗೊಳಿಸಿದರು. ಅಂತರಗಂಗೆ ರಸ್ತೆಯಲ್ಲಿರುವ ನಗರಸಭೆಯ 6 ಅಂಗಡಿ ಮಳಿಗೆಗಳಲ್ಲಿ ಒಂದನ್ನು ₹ 75 ಸಾವಿರ ಮುಂಗಡ ಪಡೆದು ಪಿ.ಎಸ್.ಮಂಜುನಾಥ್ ಎಂಬುವವರಿಗೆ ಹರಾಜಿನ ಮೂಲಕ ನೀಡಲಾಗಿತ್ತು. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ 6 ಮಳಿಗೆಯನ್ನು ತಮ್ಮ ವಶಕ್ಕೆ ಪಡೆದಿದ್ದರು.

ಮಂಜುನಾಥ್ ಅವರು ಹಣ ನೀಡಿದ್ದರಿಂದ ನಗರಸಭೆಯ ಮಳಿಗೆಯ ಪಕ್ಕದಲ್ಲಿಯೇ 10 ಅಡಿ ಉದ್ದ ಮತ್ತು 10 ಅಡಿ ಅಗಲದ ಮಳಿಗೆಯನ್ನು ನಗರಸಭೆಯಿಂದಲೇ ನಿರ್ಮಿಸಿ ನೀಡಲಾಗಿತ್ತು. ಇದಕ್ಕೆ ಸಾಮಾನ್ಯ ಸಭೆಯ ಅನುಮೋದನೆ ಸಹ ಪಡೆಯಲಾಗಿತ್ತು.

ಆದರೆ ನಗರಸಭಾ ಸದಸ್ಯ ಮುರಳೀಗೌಡ‌ ಮಳಿಗೆ ನಿರ್ಮಿಸಿ ನೀಡಿರುವುದು ಕಾನೂನು ಬಾಹಿರ ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಪೌರಾಡಳಿತ ನಿರ್ದೇಶನಾಲಯ ಪರಿಶೀಲನೆ ನಡೆಸಿ ಮಳಿಗೆ ತೆರವುಗೊಳಿಸಬೇಕು ಎಂದು ನಗರಸಭೆಗೆ ಸೂಚನೆ ನೀಡಿತ್ತು. ಆಯುಕ್ತ ರಾಮ್‌ ಪ್ರಕಾಶ್ ಹಾಗೂ ತಂಡ ಜೆಸಿಬಿ ಮೂಲಕ ತೆರವುಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.