ADVERTISEMENT

ನಾಲಾಬದು, ಗೋಕಟ್ಟೆ ಕಾಮಗಾರಿ ಕಳಪೆ; ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 7:11 IST
Last Updated 20 ಸೆಪ್ಟೆಂಬರ್ 2017, 7:11 IST

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿ ವ್ಯಾಪ್ತಿಯ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಜಲಾನಯನ ಯೋಜನೆಯಡಿ ನಿರ್ಮಿಸಿರುವ ನಾಲಾಬದು ಮತ್ತು ಗೋಕಟ್ಟೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಪೂರ್ಣವಾಗಿ ಬಿಲ್ ಪಾವತಿ ಮಾಡಲಾಗಿದೆ ಎಂದು ಆ ಭಾಗದ ರೈತರು ಆರೋಪಿಸಿದ್ದಾರೆ.

ಇಲಾಖೆ ಮಾರ್ಗಸೂಚಿಯಂತೆ ನಾಲಾಬದು ನಿರ್ಮಾಣಕ್ಕೆ ತಳಪಾಯ ಹಾಕಿ, ಜೇಡಿಮಣ್ಣಿನ ಕೋರುಬಂದ್ ಹಾಕಬೇಕು. ಆದರೆ, ಅಕ್ಕಪಕ್ಕದ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ನಾಲಾಬದು ನಿರ್ಮಿಸಲಾಗಿದೆ. ಇದರಿಂದ ಯೋಜನೆ ಉದ್ದೇಶದಂತೆ ನಾಲಾಬದುವಿನಲ್ಲಿ ನೀರು ನಿಲ್ಲುತ್ತಿಲ್ಲ. ಗೋಕಟ್ಟೆಗೆ ಕಲ್ಲು ಕಟ್ಟಡ ಕಟ್ಟಿಲ್ಲ. ಕಟ್ಟೆಯ ಮಣ್ಣೆಲ್ಲ ನೀರಿನೊಳಕ್ಕೆ ಕುಸಿಯುತ್ತಿದೆ ಎಂದು ಚಾಮನಹಳ್ಳಿ ಗ್ರಾಮಸ್ಥ ರಾಮಚಂದ್ರರೆಡ್ಡಿ ದೂರಿದ್ದಾರೆ.

ಕೃಷಿಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಅಧಿಕಾರಿಗಳಿಗೆ ಹಣ ನೀಡಿ ಒಂದೂವರೆ ವರ್ಷ ಕಳೆದಿದೆ. ಆದರೆ, ಇದುವರೆಗೂ ಅಗತ್ಯ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ADVERTISEMENT

ಕೃಷಿಹೊಂಡದ ಟಾರ್ಪಾಲ್‌ಗೆ ₹13,290, ಪಂಪ್‌ಸೆಟ್ ಮತ್ತು ತುಂತುರು ನೀರಾವರಿ ಘಟಕಗಳಿಗೆ ₹,11,500 ಹಣ ನೀಡಲಾಗಿದೆ. ಪಂಪ್‌ಸೆಟ್ ಮಾತ್ರ ಒದಗಿಸಿರುವ ಅಧಿಕಾರಿಗಳು ಇದುವರೆಗೂ ಟಾರ್ಪಾಲ್ ಮತ್ತು ತುಂತುರು ನೀರಾವರಿ ಘಟಕ ನೀಡಿಲ್ಲ ಎಂದು ಕೃಷಿಹೊಂಡ ಫಲಾನುಭವಿ ಚಿಕ್ಕ ಈಶ್ವರಪ್ಪ ಅವರ ಮಗ ಚಿನ್ನಪ್ಪಯ್ಯ ದೂರಿದ್ದಾರೆ.

ಸುಮಾರು ಎರಡು ವರ್ಷದಿಂದ ಕೃಷಿ ಹೊಂಡಕ್ಕೆ ಟಾರ್ಪಾಲ್ ಹಾಕದ ಕಾರಣ ಮಳೆ ನೀರಿನೊಂದಿಗೆ ಹರಿದ ಮಣ್ಣು ಹೊಂಡದಲ್ಲಿ ತುಂಬಿದೆ. ಅರವತ್ತು ಸಾವಿರ ವೆಚ್ಚ ಮಾಡಿ ಹೊಂಡ ನಿರ್ಮಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ. ನಮಗಾದ ನಷ್ಟ ಭರಿಸುವವರ್‍ಯಾರು ಎಂದು ಪ್ರಶ್ನಿಸಿದ್ದಾರೆ.

'ಟಾರ್ಪಾಗೆ ಪಡೆದಿದ್ದ ಡಿ.ಡಿಯನ್ನು ಕಾಮಸಮುದ್ರ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ ಅಧಿಕಾರಿ ಶ್ರೀಧರ್ ಅವರಿಗೆ ನೀಡಿದ್ದೆ. ಆದರೆ, ಸಹಾಯಕ ನಿರ್ದೇಶಕರು, ಹಿಂದೆ ಇದ್ದ ಕೃಷಿ ಸಹಾಯಕ ಅಧಿಕಾರಿ ಮಂಜುನಾಥ್ ಅವರು ಡಿಡಿ ಸ್ವೀಕರಿಸಿದ್ದರು ಎಂದು ಅಸಮಂಜಸ ಹೇಳಿಕೆ ನೀಡಿದ್ದಾರೆ' ಎಂದು ಬೋಡಪಟ್ಟೆ ಶಿವಕುಮಾರ್ ತಿಳಿಸಿದ್ದಾರೆ.

ಕೃಷಿ ಇಲಾಖೆಯ ಈ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮೂರು ವಾರದ ಹಿಂದೆಯೇ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣ ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.