ADVERTISEMENT

ನಿದ್ದೆಯಲ್ಲಿರುವ ನಗರಸಭೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:56 IST
Last Updated 16 ಜುಲೈ 2017, 5:56 IST
ಕೆಜಿಎಫ್ ರಾಬರ್ಟಸನ್ ಪೇಟೆ ಮೂರನೇ ಕ್ರಾಸ್‌ನಲ್ಲಿ ವೃತ್ತವೊಂದರಲ್ಲಿ ವಿಲೇವಾರಿ ಆಗದ ಕಸದ ರಾಶಿ
ಕೆಜಿಎಫ್ ರಾಬರ್ಟಸನ್ ಪೇಟೆ ಮೂರನೇ ಕ್ರಾಸ್‌ನಲ್ಲಿ ವೃತ್ತವೊಂದರಲ್ಲಿ ವಿಲೇವಾರಿ ಆಗದ ಕಸದ ರಾಶಿ   

ಕೆಜಿಎಫ್‌: ನಗರದಲ್ಲಿ ಹೆಚ್ಚುತ್ತಿರುವ ಡೆಂಗಿ ಜ್ವರ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಜ್ವರ ತಡೆಗೆ ನಗರಸಭೆ  ಪ್ರಯತ್ನ ಮಾಡುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಶಂಕಿತ ಡೆಂಗಿಗೆ ನಗರದಲ್ಲಿ ಇಬ್ಬರು ಬಲಿಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.

ಒಂದು ತಿಂಗಳಿಂದ ಜ್ವರದ ಬಗ್ಗೆ ಮಾಹಿತಿ ಇತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಭೇಟಿ ಮಾಡಿ ನೀರಿನ ಶೇಖರಣಾ ಕೇಂದ್ರದ ಬಗ್ಗೆ ತಪಾಸಣೆ ಮಾಡುತ್ತಿದ್ದರು. ಆದರೆ ನಗರಸಭೆ ಮಾತ್ರ ಎರಡು ಅರಿವು ಕಾರ್ಯಕ್ರಮವನ್ನು ಹೊರೆತು ಪಡಿಸಿದರೆ ಹೇಳಿಕೊಳ್ಳುವಂತ ಪ್ರಚಾರ ನಡೆಸಲಿಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

ಫಾಗಿಂಗ್ ಇಲ್ಲ: ಮೈನಿಂಗ್ ಪ್ರದೇಶದಲ್ಲಿ ಸ್ವಚ್ಛತೆ ಗುತ್ತಿಗೆ ಪಡೆದ ಸಂಘವೊಂದು ಕಾರ್ಮಿಕರನ್ನೇ ನಿಯೋಜಿಸುತ್ತಿಲ್ಲ ಎಂದು ನಗರಸಭೆಯ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಯಂತ್ರಗಳೇ ಇರಲಿಲ್ಲ. ಒತ್ತಡ ಹೆಚ್ಚಾದಾಗ ಗುರುವಾರ ಎರಡು ಹೊಸ ಯಂತ್ರಗಳನ್ನು ಖರೀದಿ ಮಾಡಲಾಗಿದೆ. ಹನ್ನೊಂದು ಚದರ ಕಿ.ಮೀ ವ್ಯಾಪ್ತಿಯ ನಗರಕ್ಕೆ ಎರಡು ಫಾಗಿಂಗ್‌ ಯಂತ್ರಗಳು ಸಾಲುತ್ತಿಲ್ಲ.

ಕಸದ ರಾಶಿ: ‘ಪರಿಸ್ಥಿತಿ ಬಿಗಡಾಯಿಸುತ್ತಿ ದ್ದರೂ ಸ್ವಚ್ಛತೆ ಆಮೆ ಗತಿಯಲ್ಲಿ ನಡೆಯುತ್ತಿದೆ. ಕಸದ ರಾಶಿ ಎದ್ದುಕಾಣುತ್ತಿದೆ. ಕಸದ ರಾಶಿ ತಿಂಗಳುಗಟ್ಟಲೆ ಬಿದ್ದಿರುತ್ತದೆ. ಅದನ್ನು ಸ್ವಚ್ಚಗೊಳಿಸಲು ನಗರಸಭೆ ಮುಂದಾಗುತ್ತಿಲ್ಲ’ ಎಂದು ಸದಸ್ಯೆ ದೀಪಾರಾಂಖ ಆರೋಪಿಸುತ್ತಾರೆ.

ಶುಕ್ರವಾರ ಜಿಲ್ಲಾಧಿಕಾರಿಗೆ ಸಮಸ್ಯೆ ಕುರಿತು ಅವರು ಮನವಿ ಸಹ ನೀಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬಳಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಇನ್ನೂರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿದ್ದಾರೆ.

ಡೆಂಗಿಗೆ ಮತ್ತೊಂದು ಬಲಿ
ಕೆಜಿಎಫ್‌: ಶಂಕಿತ ಡೆಂಗಿ ಜ್ವರಕ್ಕೆ ನಗರದ ಟೂಬ್ಲಾಕ್‌ ಆಂಧ್ರಲೈನಿನಿ ನಿವಾಸಿ ಜಯ ರಾಜಶೇಖರನ್ (23) ಶುಕ್ರವಾರ ಮೃತಪಟ್ಟಿದ್ದಾರೆ. ಶಂಕಿತ ಡೆಂಗಿಯಿಂದ ನಗರದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ.

ಜಯರಾಜಶೇಖರನ್‌ ಐದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಜಯರಾಜಶೇಖರ್‌ ಸ್ಥಳೀಯ ಫುಟ್ಬಾಲ್ ಕ್ಲಬ್‌ನಲ್ಲಿ ಆಟಗಾರರಾಗಿದ್ದರು.

* * 

ಡೆಂಗಿ ಲಕ್ಷಣಗಳು ಕಂಡ ಬಂದ ತಕ್ಷಣವೇ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಾರ್ವ ಮರಿ ಇರುವಿಕೆ ಪತ್ತೆ ಹಚ್ಚಿದ್ದರು. ನೀರು ಶೇಖರಣೆ ಮಾಡದಂತೆ ಸೂಚನೆ ನೀಡಿದ್ದರು. ವಾರ್ಡ್‌ಗಳಲ್ಲಿ ಗುಂಪು ಸಭೆ ಆಯೋಜಿಸಿ ಜಾಗೃತಿ ನಡೆಸಿದ್ದರು.
ಡಾ.ಕಮಲಾಕರ,  ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.