ADVERTISEMENT

ನಿಲಯದಲ್ಲಿ ಮಲಗದ ವಿದ್ಯಾರ್ಥಿಗಳು

ವಿದ್ಯಾರ್ಥಿ ನಿಲಯಕ್ಕೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:14 IST
Last Updated 8 ಮಾರ್ಚ್ 2017, 10:14 IST

ಮಾಲೂರು: ತಾಲ್ಲೂಕಿನ ಲಕ್ಕೂರು ಗ್ರಾಮದ ಹಿಂದುಳಿದ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ ಸೋಮವಾರ ಸಂಜೆ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಹಿಂದುಳಿದ ಅಲ್ಪಸಂ ಖ್ಯಾತರ ವಿದ್ಯಾರ್ಥಿನಿಲಯದಲ್ಲಿ 5ರಿಂದ  10 ನೇ ತರಗತಿಯವರೆಗೆ ವಿದ್ಯಾರ್ಥಿ ಗಳಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳ ಸಂಖ್ಯೆ ಗಣನೀಯ ವಾಗಿ ಕಡಿಮೆಯಾಗಿದೆ. 

ನಿತ್ಯ ಮುಂಜಾನೆ ಹಾಗೂ ಸಂಜೆ ಹಾಜರಾತಿ ಪಡೆಯುವರು. ಸಮಯಕ್ಕೆ ಸರಿಯಾಗಿ ಊಟ, ಮೊಟ್ಟೆ, ಹಣ್ಣು ನೀಡುವರು. ಆದರೆ ಮಲಗುವುದಕ್ಕೆ ಸರಿಯಾದ ಜಮಖಾನ ನೀಡದ ಕಾರಣ ಕಿತ್ತು ಹೋಗಿರುವ ಚಾಪೆಗಳ ಮೇಲೆ ಮಲಗಬೇಕಾಗಿದೆ. ನಿಲಯದಲ್ಲಿ ಮಲಗಲು ಆಗುವುದಿಲ್ಲ. ರಾತ್ರಿ ಪಾಠಕ್ಕೆ ಹೋದರೆ, ಅಲ್ಲಿಯೇ ಮಲಗುತ್ತೇವೆ. ವಿದ್ಯಾರ್ಥಿ ನಿಲಯದಲ್ಲಿ 2 ಸ್ನಾನದ ಕೊಠಡಿ , 2 ಶೌಚಾಲಯ ಇವೆ.

ಸ್ವಚ್ಚತೆ ಇಲ್ಲದ ಕಾರಣ ಮೂಗು ಮುಚ್ಚಿ ಸ್ನಾನ ಮಾಡಬೇಕು. ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ನೂತನ ಶೌಚಾಲಯಗಳಿಗೆ ನೀರಿನ ಸಂಪರ್ಕ ನೀಡದ ಕಾರಣ ಬಯಲಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ನಿಲಯದಲ್ಲಿ 8 ರಿಂದ 10 ವಿದ್ಯಾರ್ಥಿಗಳು ಮಲಗುತ್ತಿದ್ದಾರೆ. ಕೆಲವರು ಮನೆಗೆ ತೆರಳುತ್ತಾರೆ ಎಂದು ವಿದ್ಯಾರ್ಥಿಗಳು ವಿವರಿಸಿದರು. 

‘ನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಲಕ್ಕೂರು ಗ್ರಾಮದವರಾಗಿದ್ದಾರೆ. ಊಟ ಮುಗಿದ ನಂತರ ಮನೆಗಳಿಗೆ ತೆರಳುತ್ತಿದ್ದಾರೆ. ದಾಖಲಾತಿಯಲ್ಲಿ ವಿದ್ಯಾರ್ಥಿಗಳ ವಿಳಾಸ, ಪಕ್ಕದ ಗ್ರಾಮಗಳ ಹೆಸರನ್ನು ನಮೂದಿಸಿ ಮೋಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಅರ್ಜಿಗಳಲ್ಲಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದರೆ ಎಲ್ಲ ವಿದ್ಯಾರ್ಥಿಗಳು ಲಕ್ಕೂರು  ಗ್ರಾಮದವರೇ ಆಗಿರುತ್ತಾರೆ.

ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು  ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ನಾಗೇಶ್ ತಿಳಿಸಿದರು. ಪಿಡಿಒ ಎಸ್.ಪಿ.ಕಾಶಿನಾಥ್, ಸದಸ್ಯ ಕೋಡಿಹಳ್ಳಿ ರಾಜಪ್ಪ, ತಾಳಕುಂಟೆ ಮುನಿರಾಜು, ಮುಖಂಡ ಫಯಾಜ್, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT