ADVERTISEMENT

ನೀರಿನ ಸಮಸ್ಯೆ: ಚುರುಕಾಗಿ ಕೆಲಸ ಮಾಡಿ

ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ: ಅಧಿಕಾರಿಗಳಿಗೆ ಸಂಸದ ಕೆ.ಎಚ್‌.ಮುನಿಯಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 6:16 IST
Last Updated 21 ಫೆಬ್ರುವರಿ 2017, 6:16 IST
ಕೋಲಾರ: ‘ರಾಜೀವ್‌ಗಾಂಧಿ ವಸತಿ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನ ಕಲ್ಪಿಸಲು ಮತ್ತು ಬೇಸಿಗೆಯಲ್ಲಿ ಎದುರಾಗಲಿರುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಸೂಚನೆ ನೀಡಿದರು.
 
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ನಿವೇಶನರಹಿತರ ಬಗ್ಗೆ ಮಾ.6ರೊಳಗೆ ಸರ್ಕಾರಕ್ಕೆ ಸಮಗ್ರ ಮಾಹಿತಿ ಸಲ್ಲಿಸಿ. ನೀರಿನ ಸಮಸ್ಯೆಯ ಪರಿಹಾರಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
 
ಜಿಲ್ಲೆಯ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳಲ್ಲಿನ ನಿವೇಶನರಹಿತರಿಗೆ ನಿವೇಶನ ಕಲ್ಪಿಸಬೇಕು. ನಂತರ ಅವರಿಗೆ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿ ಕೊಡಬೇಕು. ಬಡವರಿಗೆ ವಾಸಕ್ಕೆ ಒಂದು ಸೂರು ನಿರ್ಮಿಸಿ ಕೊಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
 
ಜಿಲ್ಲೆಯಲ್ಲಿ ಈ ವರ್ಷ ಮಳೆ ಪ್ರಮಾಣ ಕುಸಿದಿದೆ. ಇದರಿಂದ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಹೆಚ್ಚು. ಜಿಲ್ಲಾಡಳಿತ ಈಗಲೇ ಎಚ್ಚೆತ್ತು ಜನತೆಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಬೆಸ್ಕಾಂ ಅಧಿಕಾರಿಗಳು ಹೊಸ ಕೊಳವೆ ಬಾವಿಗಳಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಬೂಬು ಹೇಳುತ್ತಾ ಜನರಿಗೆ ತೊಂದರೆ ಕೊಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒಗೆ ಆದೇಶಿಸಿದರು.
 
ಜಮೀನು ಗುರುತು: ‘ಜಿಲ್ಲೆಯ 5 ತಾಲ್ಲೂಕುಗಳಲ್ಲಿ 4,775 ಮಂದಿ ಭೂಮಿ ಮತ್ತು ನಿವೇಶನರಹಿತರಿದ್ದಾರೆ. ಇವರಿಗೆ ನಿವೇಶನ ಕಲ್ಪಿಸಲು ಈಗಾಗಲೇ 300 ಹೆಕ್ಟೇರ್ ಜಮೀನು ಗುರುತಿಸಲಾಗಿದೆ. ಕೆಲವೆಡೆ ಸರ್ಕಾರಿ ಜಮೀನು ಲಭ್ಯವಿದೆ. ಸರ್ಕಾರಿ ಅಥವಾ ಗ್ರಾಮ ಠಾಣಾ ಜಾಗವಿಲ್ಲದ ಕಡೆ ಗ್ರಾಮಾಂತರ ಪ್ರದೇಶದಲ್ಲೇ ಜಮೀನು ಖರೀದಿಸಿ ನಿವೇಶನ ಕೊಡಲು ನಿರ್ಧರಿಸಲಾಗಿದೆ. ರಾಜೀವ್‌ಗಾಂಧಿ ವಸತಿ ನಿಗಮದಿಂದ ಅನುಮತಿ ಪಡೆದ ನಂತರ ನಿವೇಶನಗಳನ್ನು ವಿತರಿಸಬಹುದು’ ಎಂದು ಉಪ ವಿಭಾಗಾಧಿಕಾರಿ ಸಿ.ಎನ್‌.ಮಂಜುನಾಥ್‌ ಸಭೆಯಲ್ಲಿ ವಿವರಿಸಿದರು.
 
ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್‌ಕುಮಾರ್ ಅವರು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಾಗಲೇ 16 ಸಾವಿರ ನಿವೇಶನ ಮತ್ತು ಮನೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದಾರೆ. ಈ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
 
‘ಕೋಲಾರ ಮತ್ತು ಕೆಜಿಎಫ್ ನಗರಸಭೆ ವ್ಯಾಪ್ತಿ, ಮುಳಬಾಗಿಲು, ಬಂಗಾರಪೇಟೆ, ಮಾಲೂರು ಹಾಗೂ ಶ್ರೀನಿವಾಸಪುರ ಪಟ್ಟಣದಲ್ಲಿ 10,787 ಮಂದಿ ನಿವೇಶನರಹಿತರನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ರೇಣುಕಾ ಮಾಹಿತಿ ನೀಡಿದರು.
 
‘ಆಯಾ ತಾಲ್ಲೂಕುಗಳಲ್ಲಿ ಸ್ಥಳೀಯರ ಶಾಸಕರ ಅಧ್ಯಕ್ಷತೆಯಲ್ಲಿ ಜಾಗೃತಿ ಸಮಿತಿ ರಚಿಸಿ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಪ್ರತಿ ಗ್ರಾಮದಲ್ಲೂ ಪರಿಶೀಲನೆ ನಡೆಸಿ ಅರ್ಹರನ್ನು ಪಟ್ಟಿಯಲ್ಲಿ ಸೇರಿಸಬೇಕು. ಆದಷ್ಟು ಬೇಗ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿ. ಬಳಿಕ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ನಿವೇಶನ ಮತ್ತು ಮನೆಗಳ ಹಂಚಿಕೆಗೆ ಶೀಘ್ರವೇ ಅನುಮತಿ ಕೊಡಿಸುತ್ತೇನೆ’ ಎಂದು ಮುನಿಯಪ್ಪ ಭರವಸೆ ನೀಡಿದರು.
 
ಬೇಜವಾಬ್ದಾರಿ: ‘ನಗರಸಭೆ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಕೊರೆದಿರುವ 59 ಕೊಳವೆ ಬಾವಿಗಳಿಂದ ಪಟ್ಟಣಕ್ಕೆ ಈವರೆಗೂ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ನೀರನ್ನು ಪಟ್ಟಣಕ್ಕೆ ತರಲು ಆಗಿಲ್ಲ’ ಎಂದು ಮುಳಬಾಗಿಲು ನಗರಸಭೆ ಅಧ್ಯಕ್ಷ ಎಂ.ಆರ್‌.ಮುರಳಿ ಆರೋಪಿಸಿದರು.
 
ತಾ.ಪಂ ಅಧ್ಯಕ್ಷ ನೀಲಕಂಠೇಗೌಡ ಮತ್ತು ಅವರ ಸಹೋದರ ನಗರದಲ್ಲಿ ಕೊಳವೆ ಬಾವಿ ಕೊರೆಯುವ ಹಾಗೂ ಪೈಪ್‌ಲೈನ್ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಅವರು 59 ಕೊಳವೆ ಬಾವಿ ಕೊರೆದು 83 ಕೊಳವೆ ಬಾವಿಗಳನ್ನು ಕೊರೆದಿರುವುದಾಗಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಅಲ್ಲದೇ, ನಗರದಲ್ಲಿ ನೀರು ಸರಬರಾಜಿಗೆ ಪೈಪ್‌ಲೈನ್ ಇದ್ದರೂ ಹೊಸದಾಗಿ ಪೈಪ್‌ಲೈನ್ ಕಾಮಗಾರಿಗೆ ₹ 30 ಕೋಟಿ ಯೋಜನೆ ರೂಪಿಸಲಾಗಿದೆ ಎಂದು ದೂರಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ‘ಯಾವುದೇ ಪಕ್ಷದ ಆಡಳಿತವಿರಲಿ. ಜನರಿಗೆ ನೀರು ಕೊಡುವುದು ಎಲ್ಲರ ಜವಾಬ್ದಾರಿ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಪೈಪ್‌ಲೈನ್‌ ಕಾಮಗಾರಿ ಸದ್ಯಕ್ಕೆ ಬೇಡ. ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ 15 ದಿನದೊಳಗೆ ಪಂಪ್ ಮತ್ತು ಮೋಟರ್‌ ಅಳವಡಿಸಲು ಕ್ರಮ ಕೈಗೊಳ್ಳಿ. ಸರ್ಕಾರದಿಂದ ಮಂಜೂರಾಗಿರುವ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋದರೆ ಹೇಗೆ’ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಗೀತಮ್ಮ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಸಭೆಯಲ್ಲಿ ಪಾಲ್ಗೊಂಡಿದ್ದರು.
 
**
 ತಹಶೀಲ್ದಾರ್‌  ನೇತೃತ್ವದಲ್ಲಿ ಕಾರ್ಯಪಡೆ
ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ಎಚ್ಚರ ತಪ್ಪುವಂತಿಲ್ಲ. ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಕಾರ್ಯಪಡೆ ಸಮಿತಿಗಳನ್ನು ರಚಿಸಿ ನೀರಿನ ಸಮಸ್ಯೆ ನಿರ್ವಹಣೆಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ. ಬೇಜವಾಬ್ದಾರಿ ತೋರುವ ಅಧಿಕಾರಿಗಳಿಗೆ ಸರಿಯಾದ ಪಾಠ ಕಲಿಸಿ ಎಂದು ಮುನಿಯಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.
 
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೆಳಿಗ್ಗೆ 9 ಗಂಟೆಯವರೆಗೆ ಪ್ರತಿ ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಿ ಜನರ ನೀರಿನ ಬವಣೆ ಅರಿತು ಕೆಲಸ ಮಾಡಬೇಕು. ಸರ್ಕಾರದಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ. ನೀರಿನ ಸಮಸ್ಯೆ ನೀಗಿಸಲು ಸರ್ಕಾರ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ. ಆದರೆ, ಆ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಅಧಿಕಾರಿಗಳು ಜವಾಬ್ದಾರಿ ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.