ADVERTISEMENT

ನೀಲಗಿರಿ ತೆರವಿಗೆ ಜಾಗೃತಿ ಮೂಡಿಸಿ

ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:27 IST
Last Updated 18 ಜುಲೈ 2017, 6:27 IST

ಕೋಲಾರ: ‘ಕೃಷಿಗೆ ಮಾರಕವಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯ ಆಂದೋಲನದ ರೀತಿ ನಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನರೇಗಾ ಯೋಜನೆ ಸಂಬಂಧ ನಗರದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ನರೇಗಾದಲ್ಲಿ ಸಿಗುವ ಸವಲತ್ತುಗಳನ್ನು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸದ್ಬಳಕೆ ಮಾಡಬೇಕು’ ಎಂದರು.

‘ಜಿಲ್ಲೆಯಲ್ಲಿ ನೀಲಗಿರಿಯಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಮಳೆ ಸೆಳೆಯುವ ಶಕ್ತಿಯೂ ನೀಲಗಿರಿ ಮರಗಳಿಗಿಲ್ಲ. ಈ ಮರಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಆದ ಕಾರಣ ನೀಲಗಿರಿ ಮರಗಳನ್ನು ತೆಗೆದು ಹಣ್ಣಿನ ಮರಗಳು ಅಥವಾ ಅನುಕೂಲಕರವಾದ ಬೇರೆ ಜಾತಿಯ ಮರಗಳನ್ನು ಬೆಳೆಸುವಂತೆ ರೈತರಲ್ಲಿ ತಿಳುವಳಿಕೆ ಮೂಡಿಸಬೇಕು’ ಎಂದರು.

ADVERTISEMENT

ಉತ್ತಮ ಯೋಜನೆ: ‘ಕೇಂದ್ರ ಸರ್ಕಾರ ಕೃಷಿ ಕಾರ್ಮಿಕರು ಮತ್ತು ನಿರುದ್ಯೋಗಿ ಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ದಿಂದ ನರೇಗಾದಂತ ಉತ್ತಮ ಯೋಜನೆ ಜಾರಿಗೆ ತಂದಿದೆ. ಬೇರೆ ಯಾವುದೇ ಯೋಜನೆಯಲ್ಲಿ ಇಲ್ಲದಷ್ಟು ಅನುದಾನ ಈ ಯೋಜನೆಯಲ್ಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದು’ ಎಂದು ಕಿವಿಮಾತು ಹೇಳಿದರು.

‘ಬರಗಾಲ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ನರೇಗಾ ಹೇಳಿ ಮಾಡಿಸಿದ ಯೋಜನೆ. ಮಳೆ ಬೆಳೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಿದೆ. ಯೋಜನೆಯಿಂದ ನಿರುದ್ಯೋಗಿಗಳಿಗೆ ಕೆಲಸ ನೀಡುವಂತಾ ಗಬೇಕು. ಕೆಲಸ ಮಾಡಿದವರಿಗೆ ಸಕಾಲಕ್ಕೆ ಕೂಲಿ ಹಣ ಕೊಡಬೇಕು. ಕಾರ್ಮಿಕರು ಕೂಲಿ ಹಣಕ್ಕಾಗಿ ಕಚೇರಿಗಳಿಗೆ ಅಲೆಯು ವಂತಾಗಬಾರದು’ ಎಂದು ತಿಳಿಸಿದರು.

‘ಕೂಲಿ ನಂಬಿಕೊಂಡು ಕೆಲಸ ಮಾಡುವ ಕಾರ್ಮಿಕರಿಗೆ ಸಕಾಲಕ್ಕೆ ಹಣ ಕೊಡದಿದ್ದರೆ ಹೇಗೆ. ಯಾವುದೇ ಕಾರಣಕ್ಕೂ ಕೂಲಿ ನೀಡಿಕೆಯಲ್ಲಿ ವಿಳಂಬ ವಾಗಬಾರದು. ಅರಣ್ಯ ಅಭಿವೃದ್ಧಿಗೆ ಒತ್ತು ಕೊಡುವ ಯೋಜನೆಗಳು ರೂಪಿತವಾಗ ಬೇಕು. ಅರಣ್ಯ ಅಭಿವೃದ್ಧಿಪಡಿಸುವ ಜವಾಬ್ದಾರಿ ಅರಣ್ಯ ಇಲಾಖೆ ಅಧಿಕಾರಿಗಳದು. ಸಂಘ ಸಂಸ್ಥೆಗಳು ಹಾಗೂ ಶಾಲಾ ಮಕ್ಕಳನ್ನು ಬಳಸಿ ಕೊಂಡು ಸಸಿ ನೆಡುವ ಕಾರ್ಯಕ್ರಮ ಗಳನ್ನು ರೂಪಿಸಿ ಬರಡು ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿ ಮಾಡಿ’ ಎಂದರು.

ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

**

ನರೇಗಾ ಅನುದಾನವನ್ನು ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯವಲಯಕ್ಕೆ ಬಳಸಿಕೊಳ್ಳಲು ಅವಕಾಶವಿದೆ. ಸೀಬೆ, ದಾಳಿಂಬೆ, ಪಪ್ಪಾಯ, ಗೋಡಂಬಿ, ಮಾವು ಬೆಳೆಯಲು ಸಹಾಯಧನ ರೂಪದಲ್ಲಿ ನೀಡಬೇಕು.
–ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.