ADVERTISEMENT

ಬಡವರಿಗೆ ಉಚಿತ ಅನಿಲ ಸಂಪರ್ಕ

ಕೆಎಸ್ಎಫ್‌ಸಿ ಆಹಾರ ಗೋದಾಮಿಗೆ ಎನ್.ಶ್ರೀನಿವಾಸ್ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:05 IST
Last Updated 18 ಜನವರಿ 2017, 5:05 IST
ಬಡವರಿಗೆ ಉಚಿತ ಅನಿಲ ಸಂಪರ್ಕ
ಬಡವರಿಗೆ ಉಚಿತ ಅನಿಲ ಸಂಪರ್ಕ   

ಬಂಗಾರಪೇಟೆ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದ ಉಜ್ವಲ ಯೋಜನೆಯಡಿ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಲಾಗುವುದು’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಎನ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಕೆಎಸ್ಎಫ್‌ಸಿ ಆಹಾರ ಗೋದಾಮಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭ ಮಾತನಾಡಿ, ಹೊಗೆ ರಹಿತ ಸಮಾಜ ನಿರ್ಮಿಸುವುದು ಯೋಜನೆಯ ಉದ್ದೇಶ. ಕೇಂದ್ರ ಸರ್ಕಾರ ಸಿಲಿಂಡರ್, ರೇಗ್ಯುಲೇಟರ್ ನೀಡಲಿದ್ದು, ರಾಜ್ಯ ಸರ್ಕಾರ ಗ್ಯಾಸ್ ಸ್ಟೌವ್ ಉಚಿತವಾಗಿ ನೀಡಲಿದೆ’ ಎಂದು ಅವರು ಹೇಳಿದರು.

‘ತಾಲ್ಲೂಕಿನ ಕೆಲ ಗ್ಯಾಸ್ ಏಜನ್ಸಿಗಳು ಈ ಯೋಜನೆಯಡಿ ನೀಡುವ ಗ್ಯಾಸ್‌ ಸಂಪರ್ಕಕ್ಕೆ 4 ಸಾವಿರ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಕೂಡಲೆ ಪರಿಶೀಲಿಸಿ, ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಧರ್ಮರಾಯಸ್ವಾಮಿ ದೇಗುಲದ ವೃತ್ತದಲ್ಲಿರುವ ಭಾರತ್ ಗ್ಯಾಸ್ ಏಜನ್ಸಿ ವಿತರಣೆ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಅಕ್ರಮ ಗ್ಯಾಸ್‌ ಫಿಲ್ಲಿಂಗ್ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು  ತಿಳಿಸಿದರು.  

‘ಫೆಬ್ರವರಿ ತಿಂಗಳಿನಿಂದ ಬಿಪಿಎಲ್ ಪಡಿತರದಾರರಿಗೆ ಈಗ ನೀಡುತ್ತಿರುವ ಆಹಾರ ಧಾನ್ಯಗಳ ಜತೆಗೆ ರೂ.33ಕ್ಕೆ ಒಂದು ಕೆಜಿ ಹೆಸರು ಕಾಳು ವಿತರಿಸಲಾಗುವುದು. ಹೊಸ  ಬಿಪಿಎಲ್ ಕಾರ್ಡ್‌ಗೆ ಜ.20ರಿಂದ ಅರ್ಜಿ ಸಲ್ಲಿಸಬಹುದು’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ದೇವಯ್ಯ ಮಾತನಾಡಿ, ‘ಇಲಾಖೆ ಅಧಿಕಾರಿಗಳ ಪರಿಶ್ರಮದಿಂದ ಕೋಲಾರ ಜಿಲ್ಲೆಯಲ್ಲಿ ಶೇ 99ರಷ್ಟು ಪಡಿತರ ಚೀಟಿಗಳಿಗೆ ಆಧಾರ್‌ ಕಾರ್ಡ್‌ ಲಿಂಕ್ ಕಲ್ಪಿಸಲಾಗಿದೆ. ಕೂಪನ್ ನೀಡಲು ಹಣ ವಸೂಲಿ ಮಾಡುತ್ತಿರುವ ಪ್ರಾಂಚೈಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಆಹಾರ ಇಲಾಖೆಯ ಕೆಜಿಎಫ್ ಸಹಾಯಕ ನಿರ್ದೇಶಕ ನಾಗರಾಜ್, ಗೋದಾಮು ವ್ಯವಸ್ಥಾಪಕರಾದ ರಾಮಚಂದ್ರಪ್ಪ, ತೀರ್ಥಶಂಕರ್, ಆಹಾರ ಶಿರಸ್ಥೆದಾರ್ ರಂಗನಾಥ್, ಆಹಾರ ನಿರೀಕ್ಷಕ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.