ADVERTISEMENT

ಬಡವರ ಮನೆ ತಲುಪದ ಅಂಬೇಡ್ಕರ್ ಆಶಯ

ಜಿಲ್ಲೆಯಾದ್ಯಂತ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಣೆ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:09 IST
Last Updated 15 ಏಪ್ರಿಲ್ 2017, 5:09 IST
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಲ್ಯಾಪ್‌ಟಾಪ್ ವಿತರಿಸಿದರು. ಸಂಸದ ಮುನಿಯಪ್ಪ, ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಇದ್ದಾರೆ
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಲ್ಯಾಪ್‌ಟಾಪ್ ವಿತರಿಸಿದರು. ಸಂಸದ ಮುನಿಯಪ್ಪ, ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಇದ್ದಾರೆ   

ಕೋಲಾರ:‘ಅಂಬೇಡ್ಕರ್ ಆಶಯಗಳು ಬಡವರ ಮನೆಗೆ ತಲುಪದೆ ಇರುವುದು ವಿಷಾದಕರ ಸಂಗತಿ’ ಎಂದು ಸಚಿವ ಕೆ.ಆರ್.ರಮೇಶ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಶುಕ್ರವಾರ ನಡೆದ ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಧಾರ ಮೇಲೆ ದೇಶ ಅಭಿವೃದ್ಧಿಯಾಗುತ್ತಿದೆ. ಆದರೆ ದೇಶದಲ್ಲಿ ಅವರ ಆಶಯಗಳಿಗೆ ವಿರುದ್ಧವಾಗಿ ಸಮಾಜ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಅಥವಾ ಮೆರವಣಿಗೆಗೆ ಸೀಮಿತಮಾಡಬೇಡಿ. ಹರಿಕಥೆ ಹೇಳಲು ಬದನೆಕಾಯಿ ತಿನ್ನಲು ಎಂಬಂತಾಗಬಾರದು. ಅವರ ಬಗ್ಗೆ ಮಾತನಾಡುವವರು ಮೊದಲು ಅವರ ಆದರ್ಶ ಪಾಲಿಸಬೇಕು’ ಎಂದು ಕಿವಿಮಾರು ಹೇಳಿದರು.

ತರಬೇತಿ ಕೇಂದ್ರ ಸ್ಥಾಪನೆ: ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ನಗರದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರ ಸ್ಥಾಪನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದು ಹಾಗೂ ಕೋಲಾರದಲ್ಲಿ ಒಂದು ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದ್ದು, ಜಿಲ್ಲಾಧಿಕಾರಿ ಕೂಡಲೇ ಬಾಡಿಗೆ ಕಟ್ಟಡ ಹುಡುಕಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಇಂಟರ್‌ನೆಟ್, ಕಂಪ್ಯೂಟರ್ ಸೇರಿದಂತೆ ಆಧುನಿಕ ಸೌಕರ್ಯಗಳನ್ನು ಕೋಚಿಂಗ್ ಸೆಂಟರ್‌ನಲ್ಲಿ ದೆಹಲಿಯ ಪ್ರತಿಷ್ಟಿತ ಕೋಚಿಂಗ್ ಸೆಂಟರ್‌ನಿಂದಲೇ ನೇರವಾಗಿ ಆನ್‌ಲೈನ್‌ನಲ್ಲಿ ತರಗತಿ ನಡೆಸುವ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಿಂದ ವರ್ಷಕ್ಕೆ ಕನಿಷ್ಠ 50 ಮಂದಿ ಐಎಎಸ್, ಕೆಎಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೇಂದ್ರ ವನ್ನು ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ‘ಸಮಾನತೆ ಪರಿಕಲ್ಪನೆಯ ಕೂಡಿ ಬಾಳೋಣ ಎಂಬುವುದಕ್ಕೆ ಇಂದಿಗೂ ಕೆಲವಡೆ ಜಾತಿಯ ಅಡ್ಡಗೋಡೆ ನಿರ್ಮಿಸಿರುವುದು, ದೇವಾಲಯಗಳ ಪ್ರವೇಶ ನಿಷೇಧ ಆಚರಣೆಗಳು ಜೀವಂತವಾಗಿರುವುದು ದುರಂತ’ ಎಂದು ವಿಷಾದಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಿರುವ ಲ್ಯಾಪ್ ಟಾಪ್‌ ಕೆ.ಆರ್.ರಮೇಶ್‌ಕುಮಾರ್ ವಿತರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ದಲಿತ ಸಂಘಟನೆಗಳ ಸಂಯುಕ್ತ ರಂಗದ ಡಾ.ಚಂದ್ರಶೇಖರ್ ಪಾಲ್ಗೊಂಡಿದ್ದರು.

ಮುನಿಯಪ್ಪಗೆ ಮುತ್ತಿಗೆ ಹಾಕಲು ಯತ್ನ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಕೆ.ಎಚ್.ಮುನಿಯಪ್ಪಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡ ಬಾಲಾಜಿ ಚೆನ್ನಯ್ಯ ಅವರನ್ನು ಪೊಲೀಸರು ತಡೆದು ಹೊರ ಕಳುಹಿಸಿದರು.

ಜಯಂತಿಯಲ್ಲಿ ಮುನಿಯಪ್ಪ ಪಾಲ್ಗೊಳ್ಳಲು ಅವಕಾಶ ನೀಡದಂತೆ ತಡೆಯಬೇಕು ಎಂದು ವಿವಿಧ ದಲಿತ ಮುಖಂಡರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಆದರೆ ಬಾಲಾಜಿ ಚೆನ್ನಯ್ಯ ಅವರ ಮನವಿಗೆ ಸ್ಪಂದಿಸದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಅಂಬೇಡ್ಕರ್ ಜಯಂತಿ  ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ರಂಗಮಂದಿರದ ಆವರಣಕ್ಕೆ ಬಂದ ಮುನಿಯಪ್ಪ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ವೇದಿಕೆಯ ಕಡೆ ಹೋಗಲು ಯತ್ನಿಸಿದರು.

‘ಮುನಿಯಪ್ಪ ದಲಿತ ಸಮುದಾಯಗಳ ಮಧ್ಯೆ ಒಡಕು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಒಗ್ಗಟಾಗಿರುವ ದಲಿತ ಸಮುದಾಯ ಮಧ್ಯೆ ಎಡಗೈ ಮತ್ತು ಬಲಗೈ ಸಮುದಾಯದವರು ಎಂದು ವಿಂಗಡಿಸಿ ಒಡಕು ಮೂಡಿಸುದ್ದಾರೆ’ ಎಂದು ಬಾಲಾಜಿ ಚೆನ್ನಯ್ಯ ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.