ADVERTISEMENT

ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಿ

ಬೇಸಿಗೆ ಬಿಸಿಯೂಟ ಸವಿಯೋಣ ಬಾರ ರಸದೂಟ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:00 IST
Last Updated 12 ಏಪ್ರಿಲ್ 2017, 5:00 IST

ಕೋಲಾರ: ‘ಬೇಸಿಗೆ ಬಿಸಿಯೂಟ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಶಿಕ್ಷಕರು ಒತ್ತು ನೀಡಬೇಕು’ ಎಂದು ಮಧ್ಯಾಹ್ನ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ಎಸ್.ಎನ್. ಕಣ್ಣಯ್ಯ ತಿಳಿಸಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬೇಸಿಗೆ ಬಿಸಿಯೂಟ ಸವಿಯೋಣ ಬಾರ ರಸದೂಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳಿಗಾಗಿ ಬೇಸಿಗೆ ಬಿಸಿಯೂಟ ಯೋಜನೆ ಆರಂಭಿಸಿದ್ದು, ಜಿಲ್ಲೆಯ 1,255 ಶಾಲೆಗಳಲ್ಲಿ 63 ಸಾವಿರ ವಿದ್ಯಾರ್ಥಿಗಳು  ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಹಾಗೂ ಶಾಲೆ ನಡುವಿನ ಸಂಬಂಧ ಗಟ್ಟಿಗೊಳಿಸುವ ಉದ್ದೇಶದಿಂದ ರಜಾ ದಿನಗಳಲ್ಲೂ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ.

1ನೇ ತರಗತಿಯಿಂದ 8ನೇ ತರಗತಿಯವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮೇ.27ರವರೆಗೆ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.

ಬೇಸಿಗೆ ರಜಾ ದಿನಗಳಲ್ಲಿ ಬಿಸಿಯೂಟ ನೀಡಲಾಗುತ್ತಿರುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಜತೆಗೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಪ್ರತಿಯೊಬ್ಬರು ಒತ್ತು ನೀಡಬೇಕು. ಶಾಲಾವಾರು ಮಕ್ಕಳ ಸಂಖ್ಯೆ ಬಿಸಿಯೂಟಕ್ಕೆ ಬಂದ ಮಕ್ಕಳ ಸಂಖ್ಯೆ, ಅಡುಗೆ ಸಿಬ್ಬಂದಿ, ಬಿಸಿಯೂಟಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರ ಸಂಖ್ಯೆ ಕುರಿತು ಮುಖ್ಯ ಶಿಕ್ಷಕರು ಮೊಬೈಲ್ ಮೂಲಕ ಅಕ್ಷರ ದಾಸೋಹ ಅಧಿಕಾರಿಗಳಿಗೆ ಪ್ರತಿನಿತ್ಯ ಸಂದೇಶ ಕಳುಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕ್ಷೀರಭಾಗ್ಯ ನೋಡಲ್ ಅಧಿಕಾರಿ ಮಹದೇವ ನಾಯಕ್, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಲಾಜಿ, ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್, ಶಿಕ್ಷಕರಾದ ಪಿ.ಎಂ. ಗೋವಿಂದಪ್ಪ, ಎಚ್.ಮುನಿಯಪ್ಪ, ಎಂ.ಆರ್. ಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.