ADVERTISEMENT

ಬೆಳೆ ಹಾನಿ: ಶೀಘ್ರ ಪರಿಹಾರ ನೀಡಿ

​ಪ್ರಜಾವಾಣಿ ವಾರ್ತೆ
Published 26 ಮೇ 2017, 5:23 IST
Last Updated 26 ಮೇ 2017, 5:23 IST

ಮಾಲೂರು: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ಹಾನಿಗೀಡಾದ ಕೃಷಿ ಪ್ರದೇಶಗಳಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತ ಡಾ. ಟಿ.ಎನ್. ವಿಜಯಭಾಸ್ಕರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಚಿಕ್ಕ ಸಬ್ಬೇನಹಳ್ಳಿ, ನಂಬಿಗಾನಹಳ್ಳಿ ಗ್ರಾಮಗಳ ರೈತರು ಸುಮಾರು 180 ಎಕರೆ ಭೂಮಿಯಲ್ಲಿ ಬೆಳೆದ ಟೊಮೆಟೊ, ಗಡ್ಡೆ ಕೋಸು, ಚೆಂಡು ಹೂವು, ಮಾವು, ನವಿಲುಕೋಸು, ಹೀರೆಕಾಯಿ ಮತ್ತಿತರರ ಬೆಳೆಗಳಿಗೆ ಹಾನಿಯಾಗಿದೆ.

ಚಿಕ್ಕಸಬ್ಬೆನಹಳ್ಳಿ ಗ್ರಾಮದಲ್ಲಿ ರೈತ ವಂಕಟೇಶ್ 4 ಎಕರೆ ಕೃಷಿ  ಭೂಮಿಯಲ್ಲಿ ಬೆಳೆದಿದ್ದ ಹೂಕೋಸು ಹಾಳಾಗಿದ್ದುದನ್ನು ತಂಡದ ಸದಸ್ಯರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈತ ವೆಂಕಟೇಶಪ್ಪ ಮಾತನಾಡಿ, ‘ಒಂದು ಎಕರೆ ಹೂಕೋಸು ಬೆಳೆಯಲು ₹ 1.20 ಲಕ್ಷದ ವರೆಗೆ ಖರ್ಚು ಮಾಡಲಾಗಿದೆ. ಮಳೆಗೆ ಮೊದಲು ಬೆಳೆಗೆ ಉತ್ತಮ ಬೆಲೆ ಇತ್ತು.

ADVERTISEMENT

ವ್ಯಾಪಾರಸ್ಥರು ಒಂದು ಎಕರೆ ಹೂಕೋಸನ್ನು  ₹ 3 ಲಕ್ಷಕ್ಕೆ ಖರೀದಿಸಿದ್ದರು. ಆದರೆ ಆಲಿಕಲ್ಲು ಮಳೆಯಾಗಿ ಎಲೆಗಳಲ್ಲಿ ತೂತು ಬಿದ್ದಿವೆ. ಹೂವಿನ ಮೇಲೆ ಕಪ್ಪು ಕಲೆ ಆರಂಭವಾಗಿದೆ. ಇದರಿಂದಾಗಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು’ ಎಂದು ರೈತರು ಅಳಲು ವ್ಯಕ್ತಪಡಿಸಿದರು.

ಮಳೆಯಿಂದ ಹಾಳಾದ ಟೊಮೆಟೊ, ಹಾಗಲಕಾಯಿಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದ ರೈತರು ಅಧಿಕಾರಿಗಳ ಎದುರು ಸುರಿದು ನಷ್ಟದ ಸಂಕಷ್ಟವನ್ನು ವಿವರಿಸಿದರು.
ವಿಜಯಭಾಸ್ಕರ್ ಮಾತನಾಡಿ,‘ರೈತರು ಬೆಳೆಗಳಿಗೆ ವಿಮೆ ಮಾಡಿಸಬೇಕು. ವಿಮೆ ಮಾಡಿಸಿರುವ ರೈತರಿಗೆ ಸರ್ಕಾರದಿಂದ ಶೇ 80ರಷ್ಟು ಪರಿಹಾರ ಸಿಗುವುದು ನಿಶ್ಚಿತ. ವಿಮೆ ಮಾಡಿಸದ ರೈತರಿಗೆ ಸರ್ಕಾರ ಅಲ್ಪ ಪ್ರಮಾಣದಲ್ಲಿ ನಷ್ಟ ಪರಿಹಾರ ವಿತರಿಸುವುದು’ ಎಂದು ವಿವರಿಸಿದರು.

ಆಗ ರೈತರು, ‘ನಮಗೆ ಈ ಕುರಿತು ಯಾರೂ ಮಾಹಿತಿ ನೀಡಲಿಲ್ಲ’ ಎಂದು ದೂರಿದರು. ತೋಟಗಾರಿಕಾ  ಇಲಾಖೆ ಅಧಿಕಾರಿಗಳು ರೈತರಿಗೆ ಬೆಳೆ ವಿಮೆಯ ಮಹತ್ವದ ಅರಿವು ಮೂಡಿಸಬೇಕು. ಅದಕ್ಕಾಗಿ ನಿರಂತರ ಜಾಗೃತಿ ಕಾರ್ಯಕ್ರಮ ನಡೆಸಬೇಕು’ ಎಂದು ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಾವೇರಿ , ವಿಭಾಗಾಧಿಕಾರಿ ಮಂಜುನಾಥ, ತಹಶೀಲ್ದಾರ್ ಗಿರೀಶ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವಪ್ಪ,  ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀನಾಥ್, ಗ್ರಾಮದ ಮುಖಂಡರಾದ ಅಗ್ರಿ ನಾರಾಯಣಪ್ಪ, ಕ್ಷೇತ್ರನಹಳ್ಳಿ ವೆಂಕಟೇಶ್, ಕೂರಾಂಡಹಳ್ಳಿ ರಾಜು,  ಮಾರಸಂದ್ರ ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.