ADVERTISEMENT

ಭಿನ್ನಾಭಿಪ್ರಾಯ ಬಿಟ್ಟು ಸಹಕರಿಸಿ

ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪಾಷಾ ಮನವಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 8:48 IST
Last Updated 20 ಏಪ್ರಿಲ್ 2018, 8:48 IST

ಕೋಲಾರ: ‘ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಟ್ಟು ನನ್ನ ಗೆಲುವಿಗೆ ಸಹಕರಿಸಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪಾಷಾ ಮನವಿ ಮಾಡಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಮುಖಂಡರ ಮಧ್ಯ ಭಿನ್ನಾಭಿಪ್ರಾಯ ಇದ್ದರೆ ಹೇಗೆ ಗೆಲುವು ಸಾಧಿಸಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳಿಂದ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅಭಿಯಾನ ನಡೆಸಿದ್ದಾರೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದರು.

‘ಟಿಕೆಟ್‌ಗಾಗಿ ಅರ್ಜಿ ಹಾಕಿಕೊಂಡಿದ್ದ ನಾಯಕರನ್ನು ಸಂಪರ್ಕಿಸಿ ಬೆಂಬಲ ನೀಡುವಂತೆ ಚರ್ಚಿಸಿದ್ದು, ಅವರು ಸಹ ಒಪ್ಪಿಗೆ ನೀಡಿದ್ದಾರೆ. ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಯಾವುದೇ ಚುನಾವಣೆ ಬಂದಾಗ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವುದು ಸಹಜ. ಒಬ್ಬರಿಗೆ ಟಿಕೆಟ್‌ ಸಿಕ್ಕಿದ ಮೇಲೆ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಬೇಕು’ ಎಂದು ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.

‘ಹಿಂದಿನ ಚುನಾವಣೆಯಲ್ಲಿ ಅದ ತಪ್ಪುಗಳು ಈ ಚುನಾವಣೆಯಲ್ಲಿ ಮರು ಕಳುಹಿಸದಂತೆ ಎಚ್ಚರವಹಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಜನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಕೆಪಿಸಿಸಿ ಎಸ್‌ಸಿ ಘಟಕದ ಉಪಾಧ್ಯಕ್ಷ ಕುಮಾರ್, ನಗರಸಭೆ ಮಾಜಿ ಸದಸ್ಯ ಶಾಸ್ತ್ರಿ, ಮುಖಂಡ ಅನ್ವರ್ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.