ADVERTISEMENT

ಮಳೆ: ಚುರುಕುಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 8:58 IST
Last Updated 3 ಸೆಪ್ಟೆಂಬರ್ 2017, 8:58 IST

ಶ್ರೀನಿವಾಸಪುರ: ಶುಕ್ರವಾರ ರಾತ್ರಿ ತಾಲ್ಲೂಕಿನಾದ್ಯಂತ ಚೆದುರಿದಂತೆ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರು ಹೊಲದಲ್ಲಿ ರಾಗಿ ಪೈರು ನಾಟಿ ಮಾಡುವ ಹಾಗೂ ಮಾವಿನ ತೋಟ ಉಳುಮೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ಮಳೆಯಾಗುತ್ತಿದೆ. ರಾಗಿ, ತೊಗರಿ, ಅವರೆ ಹೊಲಗಳಲ್ಲಿ ಅಂತರ ಬೇಸಾಯ ಮಾಡುತ್ತಿದ್ದಾರೆ. ರಾಗಿ ಹೊಲಗಳಲ್ಲಿ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಉಳಿದ ಬೆಳೆಗಳಲ್ಲೂ ಕಳೆ ತೆಗೆಯಲಾಗುತ್ತಿದೆ.

ಮಾವಿನ ತೋಟಗಳಲ್ಲಿ ಹುರುಳಿ ಬಿತ್ತನೆ ಮಾಡಲಾಗುತ್ತಿದೆ. ಹುರುಳಿ ಗಿಡವಾದಾಗ ಕಟ್ಟರ್‌ ಬಳಸಿ, ಕತ್ತರಿಸಿ ಮಣ್ಣಿಗೆ ಸೇರಿಸುವ ಉದ್ದೇಶದಿಂದ ಹುರುಳಿ ಬಿತ್ತನೆ ಮಾಡಲಾಗುತ್ತಿದೆ. ಕೆಲವು ರೈತರು ಕಾಳಿಗಾಗಿಯೂ ಬಿತ್ತನೆ ಮಾಡುವರು. ತೋಟಗಳಲ್ಲಿ ಬೆಳೆದಿರುವ ಪಾರ್ಥೇನಿಯಂ ಹಾಗೂ ಕಳೆ ಗಿಡಗಳನ್ನು ಕೀಳುವ ಕಾರ್ಯ ಸಹ ಪ್ರಗತಿಯಲ್ಲಿದೆ.

ADVERTISEMENT

ಇಷ್ಟಾದರೂ ಕೆರೆ ಕುಂಟೆಗಳಿಗೆ ನೀರು ಬಂದಿಲ್ಲ. ನೆಲ ತೇವಗೊಂಡಿದೆಯಷ್ಟೆ. ಜಾನುವಾರುಗಳಿಗೆ ಕುಡಿಯುವ ನೀರು ಸಮಸ್ಯೆ ಮುಂದುವರಿದೆ. ಈಗ ಸುರಿದಿರುವ ಮಳೆಯಿಂದಾಗಿ ಬಯಲಿನ ಮೇಲೆ ಹಸಿರು ಹುಲ್ಲು ಬೆಳೆಯುವ ಭರವಸೆ ಮೂಡಿದೆ. ಇದರಿಂದ ದನಕರುಗಳಿಗೆ ಹಸಿರು ಮೇವು ಸಿಗಲಿದೆ.

ಕೆಲವು ರೈತರು ಮಳೆಯ ತೇವ ಬಳಸಿಕೊಂಡು ಜಾನುವಾರು ಮೇವಿಗಾಗಿ ಮುಸುಕಿನ ಜೋಳ ಬಿತ್ತನೆ ಮಾಡುತ್ತಿದ್ದಾರೆ.ಮಳೆ ಕೊರತೆಯಿಂದ ಉಳುಮೆ ಮಾಡಲು ಸಾಧ್ಯವಾಗದ ರೈತರು ಈಗ ರಾಗಿ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆ ತಡವಾದರೂ, ಹಿಂಗಾರು ಮಳೆಯಾದರೆ ಬೆಳೆ ಕೈಗೆ ಬರುತ್ತದೆ ಎಂಬುದು ರೈತರ ನಂಬಿಕೆ.

ಇನ್ನು ಗದ್ದೆ ಬಯಲು ಬೀಳು ಬಿದ್ದಿದೆ. ಕೆಲವು ಕಡೆ ಮಾವಿನ ಗಿಡ ನೆಡಲಾಗಿದೆ. ಮಾವಿನ ಸಸಿ ನಾಟಿ ಮಾಡುವ ಕಾರ್ಯವೂ ನಡೆಯುತ್ತಿದೆ. ರೈತರು ಪ್ರತಿ ದಿನ ಸಾವಿರಾರು ಮಾವಿನ ಸಸಿಗಳನ್ನು ಖರೀದಿಸಿ ಕೊಂಡೊಯ್ದು ನಾಟಿ ಮಾಡುತ್ತಿದ್ದಾರೆ. ಒಣಗಿದ ಮರಗಳನ್ನು ಕೊಯ್ದು ಮತ್ತೆ ಮಾವಿನ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.