ADVERTISEMENT

ಮಹಾಭಾರತ ಓದಿಸುವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 10:34 IST
Last Updated 1 ಆಗಸ್ಟ್ 2015, 10:34 IST

ಕೋಲಾರ: ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ರಾಮಾಯಣ ಹಾಗೂ ಮಹಾಭಾರತ ಓದಿಸುವ ಹವ್ಯಾಸ ರೂಢಿಸಲು ವಿಶೇಷ ಅಭಿಯಾನ ನಡೆಸಲಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜೆ.ಜಿ.ನಾಗರಾಜ್‌ ತಿಳಿಸಿದರು.

ಭಾರತ ಸಂಸ್ಕೃತಿ ಪ್ರತಿಷ್ಠಾನ ಮತ್ತು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದೃಶ್ಯ ಮಾಧ್ಯಮದ ಪ್ರಭಾವದಿಂದ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸ ಕಡಿಮೆಯಾಗಿದೆ. ಈ ಅಭಿಯಾನದ ಮೂಲಕ ಮಕ್ಕಳನ್ನು ಮಾನವತವಾದದ ಕಡೆಗೆ ಕೊಂಡೊಯ್ಯಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತ ದೇಶದ ಸಂಸ್ಕೃತಿಯ ಪ್ರತೀಕ ಎಂದರು.

ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಅಭಿಯಾನ ನಡೆಯಲಿದೆ. 10 ಸಾವಿರ ವಿದ್ಯಾರ್ಥಿಗಳಿಗೆ ಈ ಪವಿತ್ರ ಗ್ರಂಥಗಳನ್ನು ಓದಿಸುವ ಗುರಿ ಇದೆ. ಅಭಿಯಾನದ ಬಳಿಕ ವಿದ್ಯಾರ್ಥಿಗಳಿಗೆ ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಭಿಯಾನದ ಜಿಲ್ಲಾ ಸಂಯೋಜಕ ರಾಮಣ್ಣ ಮಾತನಾಡಿ,  ವಿದ್ಯಾರ್ಥಿಗಳು ಆಗಸ್ಟ್‌ 31ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. ಮಾಹಿತಿಗೆ 9620626665 ಸಂಪರ್ಕಿಸಬಹುದು’ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಪುರುಷೋತ್ತಮರಾವ್‌, ಅಭಿಯಾನದ ಕೋಲಾರ ತಾಲ್ಲೂಕು ಸಂಯೋಜಕರಾದ ಮುನಿರಾಜು, ಕೊಮ್ಮಣ್ಣ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಕಳೆದು ಹೋಗಿರುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವುದು, ಸ್ಪರ್ಧಾತ್ಮಕ ಮನೋಭಾವ ಮೂಡಿಸುವುದು ಮತ್ತು ಓದುವ ಹವ್ಯಾಸ ಉತ್ತೇಜಿಸುವುದು ಅಭಿಯಾನದ ಮುಖ್ಯ ಉದ್ದೇಶ.    -ಜೆ.ಜಿ.ನಾಗರಾಜ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT