ADVERTISEMENT

ಮಹಿಳೆ ಸ್ವಾಭಿಮಾನದ ಸಂಕೇತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:39 IST
Last Updated 16 ನವೆಂಬರ್ 2017, 10:39 IST
ರಾಜ್ಯ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾತನಾಡಿದರು (ಎಡಚಿತ್ರ). ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.
ರಾಜ್ಯ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾತನಾಡಿದರು (ಎಡಚಿತ್ರ). ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.   

ಕೋಲಾರ: ಸ್ವಾಭಿಮಾನದ ಸಂಕೇತವಾಗಿರುವ ಮಹಿಳೆಯರು ದುಡಿಮೆಯ ಮೂಲಕ ದೇಶಕ್ಕೆ ಅನನ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಸಭೆ ಮತ್ತು ಗ್ರಾಹಕರ ಕುಂದು ಕೊರತೆ ದೂರು ನಿವಾರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಹಿಳಾ ಸ್ವಸಹಾಯ ಸಂಘಗಳು ದೇಶದ ಆರ್ಥಿಕ ಕ್ಷೇತ್ರದ ಬೆನ್ನೆಲುಬಾಗಿದ್ದು, ಈ ಸಂಘಗಳಿಗೆ ಎಷ್ಟೇ ಸಾಲ ನೀಡಿದರೂ ಮರು ಪಾವತಿಯಾಗುತ್ತದೆ. ಹೆಣ್ಣು ಮಕ್ಕಳ ಶ್ರಮದಿಂದ ಕೋಲಾರ ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸಂಘ ಸಂಸ್ಥೆಗಳಿಂದ ಸಾಲ ಪಡೆಯುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸಕಾಲಕ್ಕೆ ಸಾಲ ಹಿಂದಿರುಗಿಸಿದರೆ ಸರ್ಕಾರವೇ ಬಡ್ಡಿ ಭರಿಸುತ್ತದೆ. ಮಹಿಳೆಯರು ಸ್ವಂತ ದುಡಿಮೆಯಿಂದ ಸ್ವಾವಲಂಬಿಗಳಾಗಬೇಕು ಎಂದರು.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ನಿರುದ್ಯೋಗ ನಿವಾರಣೆಗಾಗಿ ಯುವಕ ಯುವತಿಯರಿಗೆ ಹಲವಾರು ಕೌಶಲಾಭಿವೃದ್ಧಿ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಉತ್ತಮ ಸ್ಪಂದನೆ: ಆರ್ಥಿಕ ಸೇರ್ಪಡೆ ಮೂಲಕ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ತೆರೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಶ್ರೀನಿವಾಸರಾವ್‌ ಸಂತಸ ವ್ಯಕ್ತಪಡಿಸಿದರು.

ಬ್ಯಾಂಕ್ ಸಿಬ್ಬಂದಿಯು ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಎಂದಿಗೂ ಖಾತೆಯ ಸಂಖ್ಯೆ, ಎಟಿಎಂ ಕಾರ್ಡ್‌ನ ರಹಸ್ಯ ಸಂಕೇತ ಕೇಳುವುದಿಲ್ಲ. ಆದ ಕಾರಣ ಗ್ರಾಹಕರು ಅಂತಹ ಕರೆಗಳ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಖಾತೆಯ ಮತ್ತು ಎಟಿಎಂ ಕಾರ್ಡ್‌ನ ವಿವರ ಕೊಡಬಾರದು ಎಂದು ಸಲಹೆ ನೀಡಿದರು.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಮಹಿಳೆಯರನ್ನು ಹಿಂದೆಯೇ ಇರಿಸುವ ಬದಲು ಮುಂದೆ ತರುವ ಪ್ರಯತ್ನ ಮಾಡಬೇಕು. ಬ್ಯಾಂಕ್‌ಗಳು ಹಾಗೂ ಸಂಘ ಸಂಸ್ಥೆಗಳು ಮಹಿಳಾ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಿವೆ ಎಂದು ಡಿವೈಎಸ್ಪಿ ಅಬ್ದುಲ್‌ ಸತ್ತಾರ್‌ ಹೇಳಿದರು.

ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್‌, ಪದಾಧಿಕಾರಿಗಳಾದ ಅಂಬಿಕಾ, ವೇಣು, ಚನ್ನಪ್ಪ, ಪ್ರೀತಮ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.