ADVERTISEMENT

ಮಾಫಿಯಾಕ್ಕೆ ‘ಆಪರೇಷನ್‌ ಟ್ಯಾಂಕರ್‌’ ಗುಮ್ಮ

ಅಧಿಕಾರಿಗಳ ಕಾನೂನಿನ ಅಸ್ತ್ರಕ್ಕೆ ಟ್ಯಾಂಕರ್‌ ಮಾಲೀಕರು ತತ್ತರ: ಹಣ ಕೊಟ್ಟರೂ ನೀರಿಲ್ಲ

ಜೆ.ಆರ್.ಗಿರೀಶ್
Published 6 ಮಾರ್ಚ್ 2017, 11:09 IST
Last Updated 6 ಮಾರ್ಚ್ 2017, 11:09 IST
ಮಾಫಿಯಾಕ್ಕೆ ‘ಆಪರೇಷನ್‌ ಟ್ಯಾಂಕರ್‌’ ಗುಮ್ಮ
ಮಾಫಿಯಾಕ್ಕೆ ‘ಆಪರೇಷನ್‌ ಟ್ಯಾಂಕರ್‌’ ಗುಮ್ಮ   
ಕೋಲಾರ: ಜಿಲ್ಲಾಡಳಿತವು ನಗರದಲ್ಲಿನ ‘ಟ್ಯಾಂಕರ್‌ ಮಾಫಿಯಾ’ ವಿರುದ್ಧ ಕಾನೂನಿನ ಅಸ್ತ್ರ ಪ್ರಯೋಗಿಸಿದ್ದು, ನಗರದಲ್ಲಿ ಈಗ ಹಣ ಕೊಟ್ಟರೂ ನೀರು ಸಿಗುವುದು ದುಸ್ತರವಾಗಿದೆ.
 
ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 1.75 ಲಕ್ಷ ಮೀರಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ.
 
ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ. ಬಹುಪಾಲು ಬಡಾವಣೆಗಳಲ್ಲಿ ನೀರು ಸರಬರಾಜಿಗೆ ಕೊಳವೆ ಮಾರ್ಗ (ಪೈಪ್‌ಲೈನ್‌), ನೆಲಮಟ್ಟದ ಸಂಪ್‌ ಮತ್ತು ಓವರ್‌ಹೆಡ್‌ ಟ್ಯಾಂಕ್‌ಗಳಿಲ್ಲ. ಮತ್ತೊಂದೆಡೆ ಬಡಾವಣೆ ಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ.
 
ಈ ಕಾರಣಕ್ಕಾಗಿ ಇ–ಟೆಂಡರ್‌ ನಡಿ ಖಾಸಗಿ ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಟ್ಯಾಂಕರ್‌ ನೀರು ಪೂರೈಕೆಯಲ್ಲಿ ಅಕ್ರಮ ನಡೆಯು ತ್ತಿರುವ ಕಾರಣ ಜಿಲ್ಲಾಡಳಿತವು ಟ್ಯಾಂ ಕರ್‌ ನೀರು ಸರಬರಾಜಿಗೆ ಸಾಧ್ಯವಾ ದಷ್ಟು ಕಡಿವಾಣ ಹಾಕಲು ಮುಂದಾ ಗಿದೆ. ವಾಣಿಜ್ಯ ಉದ್ದೇಶಕ್ಕೆ ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್‌ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಜಿಲ್ಲಾಧಿಕಾರಿಯು ಪೊಲೀಸರು, ಬೆಸ್ಕಾಂ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ  ಸೂಚನೆ ನೀಡಿದ್ದಾರೆ. ಜತೆಗೆ ವಾಣಿಜ್ಯ ಉದ್ದೇಶಕ್ಕೆ ಕೊಳವೆ ಬಾವಿಗಳಿಂದ ನೀರು ಕೊಡುವ ರೈತರ ಮೇಲೆ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
 
ಆಪರೇಷನ್‌ ಟ್ಯಾಂಕರ್‌: ಜಿಲ್ಲಾಧಿಕಾರಿಯ ಆದೇಶದಂತೆ ಆರ್‌ಟಿಒ, ಪೊಲೀಸರು, ಬೆಸ್ಕಾಂ ಅಧಿಕಾರಿಗಳು ನಗರದಲ್ಲಿ ‘ಆಪರೇಷನ್‌ ಟ್ಯಾಂಕರ್‌’ ಆರಂಭಿಸಿದ್ದಾರೆ. ನಾಲ್ಕೈದು ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಕಂಡ ಕಂಡಲ್ಲಿ ಟ್ಯಾಂಕರ್‌ಗಳನ್ನು ತಡೆದು ದೂರು ದಾಖಲಿಸಿ ₹ 15 ಸಾವಿರದವರೆಗೆ ದಂಡ ವಿಧಿಸುತ್ತಿದ್ದಾರೆ.
 
ವಾಹನ ವಿಮೆ, ಚಾಲನಾ ಪರವಾನಗಿ (ಡಿ.ಎಲ್‌) ಮತ್ತು ರಹದಾರಿ ಪತ್ರ (ಪರ್ಮಿಟ್‌) ಇಲ್ಲದ ಟ್ಯಾಂಕರ್‌ಗಳನ್ನು ಜಪ್ತಿ ಮಾಡಿ ಟ್ಯಾಂಕರ್‌ ಮಾಲೀಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಮತ್ತೊಂದೆಡೆ ಬೆಸ್ಕಾಂ ಅಧಿಕಾರಿಗಳು ವಾಣಿಜ್ಯ ಉದ್ದೇಶದ ಟ್ಯಾಂಕರ್‌ಗಳಿಗೆ ಕೊಳವೆ ಬಾವಿಗಳಿಂದ ನೀರು ಕೊಡುವ ರೈತರ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುತ್ತಿದ್ದಾರೆ.
 
ಅಧಿಕಾರಿಗಳ ಕಾನೂನು ಅಸ್ತ್ರಕ್ಕೆ ತತ್ತರಿಸಿರುವ ರೈತರು ತಮ್ಮ ಕೊಳವೆ ಬಾವಿಗಳಿಂದ ವಾಣಿಜ್ಯ ಉದ್ದೇಶದ ಟ್ಯಾಂಕರ್‌ಗಳಿಗೆ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಟ್ಯಾಂಕರ್‌ ಮಾಲೀಕರು ವಾಹನಗಳನ್ನು ರಸ್ತೆಗಿಳಿಸಲು ಭಯಪಡುತ್ತಿದ್ದಾರೆ. ಇದರಿ ಂದ ಗೃಹ ಬಳಕೆಗೆ ನೀರು ಸಿಗುತ್ತಿಲ್ಲ. ಕುಡಿಯುವ ಉದ್ದೇಶಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಅಧಿಕಾರಿಗಳು ಕಾನೂನು ವಿನಾಯಿತಿ ನೀಡಿದ್ದು, ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಿಲ್ಲ.
 
ಸಾರ್ವಜನಿಕರ ಸುಲಿಗೆ: ಆಪರೇಷನ್‌ ಟ್ಯಾಂಕರ್‌ನಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಹಣ ಕೊಟ್ಟರೂ ನೀರು ಸಿಗುತ್ತಿಲ್ಲ. ಟ್ಯಾಂಕರ್‌ ಮಾಲೀಕರು ಈ ಪರಿಸ್ಥಿತಿಯ ಲಾಭ ಪಡೆದು ನೀರಿನ ಬೆಲೆಯನ್ನು ಏಕಾಏಕಿ ಏರಿಸಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ವಾರದ ಹಿಂದೆ ನಗರದಲ್ಲಿ ಒಂದು ಟ್ಯಾಂಕರ್‌ ಲೋಡ್‌ ನೀರಿನ ಬೆಲೆ ಸುಮಾರು ₹ 400 ಇತ್ತು. ಅಧಿಕಾರಿಗಳ ಕಾರ್ಯಾಚರಣೆ ಆರಂಭದ ನಂತರ ಟ್ಯಾಂಕರ್‌ ಲೋಡ್‌ ನೀರಿನ ಬೆಲೆಯನ್ನು ₹ 700ರವರೆಗೆ ಹೆಚ್ಚಿಸಲಾಗಿದೆ. 
 
ಟ್ಯಾಂಕರ್‌ ಮಾಲೀಕರು ಅಧಿಕಾರಿಗಳ ಕಣ್ತಪ್ಪಿಸಿ ರಾತ್ರಿ ವೇಳೆ ಮತ್ತು ನಸುಕಿನಲ್ಲೇ ರೈತರ ಕೊಳವೆ ಬಾವಿಗಳಿಂದ ನೀರು ಪಡೆದು ಬಡಾವಣೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಸುಳಿವು ಪಡೆದಿರುವ ಅಧಿಕಾರಿಗಳು ರಾತ್ರಿಯಲ್ಲೂ ಮತ್ತು ನಸುಕಿನಲ್ಲೂ ಆಪರೇಷನ್‌ ಟ್ಯಾಂಕರ್‌ ನಡೆಸುತ್ತಿದ್ದಾರೆ.
 
ಸಂಪಾದನೆ ಇಲ್ಲ
ಅಧಿಕಾರಿಗಳು ಕಾನೂನಿನ ನೆಪ ಮಾಡಿಕೊಂಡು ಪ್ರಕರಣ ದಾಖಲಿಸಿ ಟ್ಯಾಂಕರ್‌ಗಳನ್ನು ಜಪ್ತಿ ಮಾಡುತ್ತಿದ್ದಾರೆ. ಹೀಗಾಗಿ ನೀರು ಸರಬರಾಜು ಸ್ಥಗಿತಗೊಳಿಸಿದ್ದೇವೆ. ಇದರಿಂದ ಸಂಪಾದನೆ ಇಲ್ಲದೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಜನ ಕರೆ ಮಾಡಿ ನೀರು ಕೇಳುತ್ತಿದ್ದರೂ ಅಧಿಕಾರಿಗಳ ಭಯದಿಂದ ನೀರು ಪೂರೈಕೆ ಮಾಡುತ್ತಿಲ್ಲ.
–ರಾಘವೇಂದ್ರ, ಟ್ಯಾಂಕರ್‌ ಮಾಲೀಕ
 
20 ದಿನವಾಗಿದೆ
ಬಡಾವಣೆಗೆ ನಗರಸಭೆಯ ಟ್ಯಾಂಕರ್‌ ನೀರು ಬಂದು 20 ದಿನವಾಗಿದೆ. ಬೀದಿ ನಲ್ಲಿಯಲ್ಲೂ ನೀರು ಬರುತ್ತಿಲ್ಲ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಖಾಸಗಿ ಟ್ಯಾಂಕರ್‌ ಮಾಲೀಕರು ಮನೆಗೆ ನೀರು ಸರಬರಾಜು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಣ ಕೊಟ್ಟರೂ ನೀರು ಸಿಗುತ್ತಿಲ್ಲ.
–ಸರಸ್ವತಮ್ಮ, ಶಾಂತಿನಗರ ನಿವಾಸಿ
 
15 ದಿನ ಕಾಲಾವಕಾಶ
ನೀರಿನ ಸೌಕರ್ಯಕ್ಕಾಗಿ ಸರ್ಕಾರದಿಂದ ಮಂಜೂರಾದ ಹಣದ ದುರ್ಬಳಕೆ ತಡೆಯಲು ಟ್ಯಾಂಕರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಟ್ಯಾಂಕರ್‌ಗಳ ದಾಖಲೆಪತ್ರಗಳು ಕಾನೂನುಬದ್ಧವಾಗಿರಬೇಕು. ಇದಕ್ಕೆ 15 ದಿನ ಕಾಲಾವಕಾಶ ಕೊಟ್ಟಿದ್ದೇವೆ. ಕೃಷಿ ಉದ್ದೇಶಕ್ಕಾಗಿ ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಪಡೆದಿರುವ ರೈತರು ವಾಣಿಜ್ಯ ಉದ್ದೇಶದ ಟ್ಯಾಂಕರ್‌ಗಳಿಗೆ ನೀರು ಕೊಡುವಂತಿಲ್ಲ.
– ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.