ADVERTISEMENT

ಮುನಿಯಪ್ಪ ಕುತಂತ್ರದಿಂದ ಟಿಕೆಟ್ ಕೈತಪ್ಪಿತು

ಸ್ಥಳೀಯ ಮುಖಂಡರು ಕಾಣಿಸದಿರುವುದು ದುರಂತ; ಬೆಂಬಲಿಗರ ಸಭೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 9:28 IST
Last Updated 18 ಏಪ್ರಿಲ್ 2018, 9:28 IST

ಕೋಲಾರ: ‘ಜೆಡಿಎಸ್‌ ಪಕ್ಷದಲ್ಲಿನ ಗೊಂದಲಗಳ ಕಾರಣಕ್ಕೆ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಹೋಗಿ ಟಿಕೆಟ್ ಕೇಳಿದೆ. ಆದರೆ, ಅಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಕುತಂತ್ರದಿಂದ ಅಂತಿಮ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಕಿಡಿಕಾರಿದರು.

ನಗರದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತ ಸಮುದಾಯದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಕೊಡಿ
ಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದರು. ಆದರೆ, ಈ ಮಹಾನುಭಾವ ಮುನಿಯಪ್ಪ ದೆಹಲಿ ಮಟ್ಟದಲ್ಲಿ ಸಂಚು ಮಾಡಿ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಗದಂತೆ ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತ ಸಮುದಾಯದ ಸ್ಥಳೀಯ ಮುಖಂಡ ಕಾಂಗ್ರೆಸ್‌ನ ನಸೀರ್‌ ಅಹಮ್ಮದ್‌ ಅವರು ಮುನಿಯಪ್ಪನನ್ನು ನಂಬಿ ಮೋಸ ಹೋಗಿದ್ದಾರೆ. ಮುನಿಯಪ್ಪ ದುರ್ಬಲ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ಕರೆತಂದು ಈ ಬಾರಿಯೂ ಶಾಸಕ ವರ್ತೂರು ಪ್ರಕಾಶ್‌ರನ್ನು ಗೆಲ್ಲಿಸುವ ತಂತ್ರಗಾರಿಕೆ ಮಾಡಿದ್ದಾರೆ. ಅವರ ಈ ನಾಟಕ ಕಾಂಗ್ರೆಸ್‌ ವರಿಷ್ಠರಿಗೆ ಗೊತ್ತಾಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

ADVERTISEMENT

ಪಾಠ ಕಲಿಸಬೇಕು: ‘ರಾಜಕಾರಣ ಯಾರಪ್ಪನ ಸ್ವತ್ತಲ್ಲ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯವರನ್ನು ಅಭ್ಯರ್ಥಿಯಾಗಿ ಸುವುದು ತಪ್ಪಲ್ಲ. ಆದರೆ, ಅಲ್ಪಸಂಖ್ಯಾತ ಸಮುದಾಯದಲ್ಲಿನ ಸ್ಥಳೀಯ ಮುಖಂಡರು ಮುನಿಯಪ್ಪರ ಕಣ್ಣಿಗೆ ಕಾಣಿಸದಿರುವುದು ದುರಂತ. ಅವರು ವರ್ತೂರು ಪ್ರಕಾಶ್‌ರನ್ನು ಗೆಲ್ಲಿಸಲು ರಾಮನಗರ ಜಿಲ್ಲೆಯ ಮಾಗಡಿಯಿಂದ ಜಮೀರ್ ಪಾಷಾ ಎಂಬ ದುರ್ಬಲ ಅಭ್ಯರ್ಥಿಯನ್ನು ಇಲ್ಲಿಗೆ ಕರೆ ತಂದಿದ್ದು, ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

‘ವರ್ತೂರು ಪ್ರಕಾಶ್‌ ಅವರಂತಹ ಭ್ರಷ್ಟ ಶಾಸಕರನ್ನು ಜನ್ಮದಲ್ಲಿ ನೋಡಿಲ್ಲ. 2 ಬಾರಿ ಅವರನ್ನು ಶಾಸಕರಾಗಿ ಆಯ್ಕೆ ಮಾಡಿರುವುದಕ್ಕೆ ಕ್ಷೇತ್ರದ ಜನ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ವರ್ತೂರು ಪ್ರಕಾಶ್‌ ದರೋಡೆ ಮಾಡಲೆಂದೇ ಕೋಲಾರಕ್ಕೆ ಬಂದಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಿಂತಿರುವ ಮುನಿಯಪ್ಪ ಹಿಂದೆ ನಿಂತು ಬೊಂಬೆಯಾಟ ಆಡಿಸುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಜನರಿಗೆ ಒಳ್ಳೆಯ ಅಭ್ಯರ್ಥಿಗಳು ಸಿಗಲಿಲ್ಲವೇ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಆಸ್ತಿ ಪರಿಶೀಲಿಸಿ: ‘ವರ್ತೂರು ಪ್ರಕಾಶ್‌ ಕೋಲಾರಕ್ಕೆ ಬಂದಾಗ ಅವರ ಆಸ್ತಿ ವಿವರ ಮತ್ತು ಈಗಿನ ಆಸ್ತಿಯನ್ನು ಒಮ್ಮೆ ಪರಿಶೀಲಿಸಿ. ಕ್ಷೇತ್ರದಲ್ಲಿ ಕೆಟ್ಟವರನ್ನು ಊರಾಚೆಗೆ ಹಾಕಬೇಕು. ವರ್ತೂರು ಹಠಾವೊ ಕೋಲಾರ ಬಚಾವೊಗೆ ಸಿದ್ಧರಾಗಿ. ಸದ್ಯದಲ್ಲೇ ದೊಡ್ಡ ಸಮಾವೇಶ ಮಾಡಿ ಬೆಂಬಲಿಗರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ಬೆಂಬಲಿಸಬಾರದು: ‘ಸಂಸದ ಮುನಿಯಪ್ಪ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ವಿಭಜಿಸಿ ವರ್ತೂರು ಪ್ರಕಾಶ್‌ರನ್ನು ಗೆಲ್ಲಿಸುವ ಉದ್ದೇಶಕ್ಕಾಗಿ ಜಮೀರ್‌ ಪಾಷಾರನ್ನು ಕ್ಷೇತ್ರಕ್ಕೆ ಕರೆತಂದಿದ್ದಾರೆ. ಸಮುದಾಯವು ಚುನಾವಣೆಯಲ್ಲಿ ಜಮೀರ್‌ ಪಾಷಾರನ್ನು ಬೆಂಬಲಿಸಬಾರದು’ ಎಂದು ನಗರಸಭೆ ಮಾಜಿ ಅಧ್ಯಕ್ಷ ನಜೀರ್‍ ಅಹಮ್ಮದ್‌ ಮನವಿ ಮಾಡಿದರು.

‘ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಮತದಾರರು ಒಗ್ಗಟ್ಟಾಗಿ ಈ ಬಾರಿ ಶ್ರೀನಿವಾಸಗೌಡರನ್ನು ಗೆಲ್ಲಿಸಬೇಕು. ಇಲ್ಲದಿದ್ದರೆ ಸಮುದಾಯ ಸರ್ವನಾಶ ಆಗುತ್ತದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್‌ ಪಾಷಾ ಎಚ್ಚರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ನಗರಸಭೆ ಮಾಜಿ ಉಪಾಧ್ಯಕ್ಷ ಖಲೀಲ್ ಪಾಲ್ಗೊಂಡಿದ್ದರು.

ಮುನಿಯಪ್ಪ ವಿರುದ್ಧ ಘೋಷಣೆ

ಶ್ರೀನಿವಾಸಗೌಡರನ್ನು ಹೆಗಲ ಮೇಲೆ ಹೊತ್ತು ಕ್ಲಾಕ್‌ಟವರ್‌ ವೃತ್ತದವರೆಗೆ ಮೆರವಣಿಗೆ ಮಾಡಿದ ಬೆಂಬಲಿಗರು ಸಂಸದ ಮುನಿಯಪ್ಪ ವಿರುದ್ಧ ಘೋಷಣೆ ಕೂಗಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮುನಿಯಪ್ಪ, ವರ್ತೂರು ಪ್ರಕಾಶ್‌ ಹಾಗೂ ಜಮೀರ್‌ ಪಾಷಾ ಅವರ ಭಾವಚಿತ್ರವಿರುವ ಕರಪತ್ರಗಳನ್ನು ಹಂಚಿದರು.

**

ಹಿಂದಿನ ಎರಡು ಚುನಾವಣೆಗಳಲ್ಲಿ ಕ್ಷೇತ್ರದ ಗ್ರಹಚಾರ ಕೆಟ್ಟಿದ್ದು, ಮುನಿಯಪ್ಪ ಎಂಬ ಶನಿ ವಕ್ಕರಿಸಿಕೊಂಡಿದೆ. ಅವರಂತಹ ಕಪಟಿಯನ್ನು ಎಂದೂ ನೋಡಿಲ್ಲ, ಸಂಸದ ಮುನಿಯಪ್ಪ ನಾಟಕಕಾರ – ಕೆ.ಶ್ರೀನಿವಾಸಗೌಡ, ಮುಖಂಡ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.