ADVERTISEMENT

ಮೂರು ಅಂತಸ್ತಿನ ವಾಣಿಜ್ಯ ಸಮುಚ್ಚಯ ಕುಸಿತ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 8:53 IST
Last Updated 10 ನವೆಂಬರ್ 2017, 8:53 IST
ಕೋಲಾರದ ಶಾರದಾ ಚಿತ್ರಮಂದಿರ ರಸ್ತೆಯಲ್ಲಿನ ವಾಣಿಜ್ಯ ಸಮುಚ್ಚಯ ಗುರುವಾರ ಕುಸಿದು ಪಕ್ಕದ ಕಟ್ಟಡದ ಕಡೆಗೆ ವಾಲಿರುವುದು
ಕೋಲಾರದ ಶಾರದಾ ಚಿತ್ರಮಂದಿರ ರಸ್ತೆಯಲ್ಲಿನ ವಾಣಿಜ್ಯ ಸಮುಚ್ಚಯ ಗುರುವಾರ ಕುಸಿದು ಪಕ್ಕದ ಕಟ್ಟಡದ ಕಡೆಗೆ ವಾಲಿರುವುದು   

ಕೋಲಾರ: ನಗರದ ಹೃದಯ ಭಾಗದ ಶಾರದಾ ಚಿತ್ರಮಂದಿರ ರಸ್ತೆಯಲ್ಲಿನ ಮೂರು ಅಂತಸ್ತಿನ ವಾಣಿಜ್ಯ ಸಮುಚ್ಚಯ ಗುರುವಾರ ಕುಸಿದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 1980ರಲ್ಲಿ ನಿರ್ಮಾಣವಾಗಿದ್ದ ಈ ವಾಣಿಜ್ಯ ಸಮುಚ್ಚಯವು ಶಿಥಿಲಾವಸ್ಥೆಯಲ್ಲಿತ್ತು. ಸಮುಚ್ಚಯದ ನೆಲ ಅಂತಸ್ತಿನಲ್ಲಿ ಐಸ್‌ಕ್ರೀಮ್‌ ಮಳಿಗೆ ಇತ್ತು. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೇವಗೊಂಡಿದ್ದ ಐಸ್‌ಕ್ರೀಮ್‌ ಮಳಿಗೆಯ ಗೋಡೆಗಳು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕುಸಿದಿವೆ.

ಸಮುಚ್ಚಯದ ಮೇಲಿನ ಭಾಗವು ಪಕ್ಕದ ಮತ್ತೊಂದು ಕಟ್ಟಡದ ಕಡೆಗೆ ವಾಲಿದೆ. ಸಮುಚ್ಚಯದ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ವಾಸವಿದ್ದವರು ಗಾಬರಿಯಾಗಿ ಹೊರಗೆ ಓಡಿ ಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಐಸ್‌ಕ್ರೀಮ್‌ ಮಳಿಗೆಯಲ್ಲಿನ ಪೀಠೋಪಕರಣ, ವಿದ್ಯುತ್‌ ಉಪಕರಣಗಳು, ಸಿ.ಸಿ ಕ್ಯಾಮೆರಾ ಕಟ್ಟಡದ ಅವಶೇಷಗಳಡಿ ಸಿಲುಕಿವೆ. ಎರಡನೇ ಅಂತಸ್ತಿನ ಮನೆಯಲ್ಲಿದ್ದ ಗೃಹೋಪಯೋಗಿ ಸಲಕರಣೆಗಳಿಗೆ ಹಾನಿಯಾಗಿದೆ. ಐಸ್‌ಕ್ರೀಮ್‌ ಮಳಿಗೆಯ ಪಕ್ಕದ ಮೊಬೈಲ್‌ ಅಂಗಡಿಯು ಕುಸಿದಿದ್ದು, ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ಬಿಡಿ ಭಾಗಗಳು ಅವಶೇಷಗಳಡಿ ಸಿಲುಕಿ ಜಖಂಗೊಂಡಿವೆ.

ADVERTISEMENT

ಪಕ್ಕಕ್ಕೆ ವಾಲಿರುವ ಸಮುಚ್ಚಯದ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಅಗ್ನಿಶಾಮಕ ದಳ, ನಗರಸಭೆ ಹಾಗೂ ಪೊಲೀಸ್‌ ಸಿಬ್ಬಂದಿಯು ಇಡೀ ಕಟ್ಟಡ ನೆಲಸಮಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಮುಚ್ಚಯದ ಒಂದು ಮತ್ತು ಎರಡನೇ ಅಂತಸ್ತಿನಲ್ಲಿ ವಾಸದ ಮನೆ ಹಾಗೂ ಮೂರನೇ ಅಂತಸ್ತಿನಲ್ಲಿ ಚಿಕ್ಕ ಕೊಠಡಿ ಇದ್ದವು. ಒಂದನೇ ಅಂತಸ್ತಿನ ಮನೆ ಖಾಲಿ ಇತ್ತು. ಎರಡನೇ ಅಂತಸ್ತಿನ ಮನೆಯಲ್ಲಿ ದಂಪತಿ ಸೇರಿದಂತೆ ಐದು ಮಂದಿ ಹಾಗೂ ಮೂರನೇ ಅಂತಸ್ತಿನ ಕೊಠಡಿಯಲ್ಲಿ ಐಸ್‌ಕ್ರೀಮ್‌ ಮಳಿಗೆಯ ನಾಲ್ಕು ಮಂದಿ ಕೆಲಸಗಾರರು ವಾಸವಿದ್ದರು.

ತಪ್ಪಿದ ಹೆಚ್ಚಿನ ಅನಾಹುತ: ಈ ವಾಣಿಜ್ಯ ಸಮುಚ್ಚಯವು ವೆಂಕಟಲಕ್ಷ್ಮಮ್ಮ ಎಂಬುವರಿಗೆ ಸೇರಿದೆ. 1984ರಿಂದಲೂ ಇದೇ ವಾಣಿಜ್ಯ ಸಮುಚ್ಚಯದಲ್ಲಿರುವ ಐಸ್‌ಕ್ರೀಮ್‌ ಮಳಿಗೆಯು ಸಾಕಷ್ಟು ಹೆಸರುವಾಸಿಯಾಗಿದೆ. ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಮಳಿಗೆಯಲ್ಲಿ ವಹಿವಾಟು ಆರಂಭವಾಗುತ್ತಿತ್ತು. ಸಾಮಾನ್ಯವಾಗಿ ಮಧ್ಯಾಹ್ನದ ವೇಳೆ ಮಳಿಗೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಮಳಿಗೆಯ ಬಾಗಿಲು ತೆರೆಯುವುದಕ್ಕೂ ಮುನ್ನವೇ ಸಮುಚ್ಚಯ ಕುಸಿದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ನೋಟಿಸ್‌ಗೆ ಸೂಚನೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ನಗರದಲ್ಲಿನ ಹಳೇ ವಾಣಿಜ್ಯ ಸಮುಚ್ಚಯಗಳು ಹಾಗೂ ನಿಯಮಬಾಹಿರವಾಗಿ ಕಟ್ಟಿರುವ ಹೆಚ್ಚಿನ ಅಂತಸ್ತಿನ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಕಟ್ಟಡ ದುರಸ್ತಿ ಮಾಡಿಸುವಂತೆ ತಿಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘33 ವರ್ಷಗಳಿಂದ ಇದೇ ವಾಣಿಜ್ಯ ಸಮುಚ್ಚಯದಲ್ಲಿ ವಹಿವಾಟು ನಡೆಸುತ್ತಿದ್ದೆವು. ಮಳಿಗೆ ಕುಸಿದಿರುವುದರಿಂದ ಸುಮಾರು ₹ 15 ಲಕ್ಷ ನಷ್ಟವಾಗಿದೆ’ ಎಂದು ಐಸ್‌ಕ್ರೀಮ್‌ ಮಳಿಗೆ ಮಾಲೀಕ ಹರೀಶ್‌ ಹೊಳ್ಳ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಚಾರ ನಿರ್ಬಂಧ: ವಾಣಿಜ್ಯ ಸಮುಚ್ಚಯ ಕುಸಿದ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಪೊಲೀಸರು ಸಮುಚ್ಚಯದ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟ ನಿರ್ಬಂಧಿಸಿದ್ದಾರೆ. ಅಲ್ಲದೆ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.