ADVERTISEMENT

ಮೂಲೆ ಸೇರಿದ ಕುಡಿಯುವ ನೀರು ಘಟಕಗಳು

ದುರಸ್ತಿಗೆ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು, ನಿತ್ಯ ಸುಮಾರು 70 ಲಕ್ಷ ಲೀಟರ್‌ ಅವಶ್ಯ

ಜೆ.ಆರ್.ಗಿರೀಶ್
Published 20 ಮಾರ್ಚ್ 2017, 5:28 IST
Last Updated 20 ಮಾರ್ಚ್ 2017, 5:28 IST
ಕೋಲಾರದ ಕುವೆಂಪುನಗರ ಬಡಾವಣೆಯಲ್ಲಿನ ಶುದ್ಧ ಕುಡಿಯುವ ಘಟಕದ ಬಳಿ ನೀರು ಹಿಡಿದುಕೊಳ್ಳಲು ಸಾಲುಗಟ್ಟಿ ನಿಂತಿರುವ ಸಾರ್ವಜನಿಕರು.
ಕೋಲಾರದ ಕುವೆಂಪುನಗರ ಬಡಾವಣೆಯಲ್ಲಿನ ಶುದ್ಧ ಕುಡಿಯುವ ಘಟಕದ ಬಳಿ ನೀರು ಹಿಡಿದುಕೊಳ್ಳಲು ಸಾಲುಗಟ್ಟಿ ನಿಂತಿರುವ ಸಾರ್ವಜನಿಕರು.   

ಕೋಲಾರ: ಬೇಸಿಗೆ ಆರಂಭದ ಬೆನ್ನಲ್ಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ನಗರವಾಸಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಅರ್ಧಕ್ಕೂ ಹೆಚ್ಚು ಘಟಕಗಳು ಕೆಟ್ಟು ಮೂಲೆ ಸೇರಿವೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 1.75 ಲಕ್ಷ ಮೀರಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈಗಿನ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ.

ನಗರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ನಗರಕ್ಕೆ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ.

ನಗರದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ವಿವಿಧೆಡೆ 16 ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಕೆಲವನ್ನು ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ನಿಧಿಯಿಂದ, ಮತ್ತೆ ಕೆಲ ಘಟಕಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಖಾಸಗಿ ಕಂಪೆನಿಗಳ ಹಣಕಾಸು ನೆರವಿನಿಂದ ನಿರ್ಮಾಣ ಮಾಡಲಾಗಿದೆ.

ಖಾಸಗಿ ಟ್ಯಾಂಕರ್‌ಗಳಿಂದ ಈ ಘಟಕಗಳಿಗೆ ಪ್ರತಿನಿತ್ಯ ನೀರು ತುಂಬಿಸಲಾಗುತ್ತದೆ. ಬಳಿಕ ಘಟಕದಲ್ಲಿ ನೀರು ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತದೆ. ಈ ಘಟಕಗಳು ಪ್ರತಿ ಗಂಟೆಗೆ 500ರಿಂದ 1 ಸಾವಿರ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿವೆ. ಘಟಕಗಳಲ್ಲಿ ಅಳವಡಿಸಿರುವ ಕಾಯಿನ್‌ ಬೂತ್‌ ಮಾದರಿಯ ಸಾಧನಕ್ಕೆ ₹ 5ರ ನಾಣ್ಯ ಹಾಕಿದರೆ 20 ಲೀಟರ್‌ ನೀರು ಬರುತ್ತದೆ. ಘಟಕಗಳಲ್ಲಿ ನೀರು ವಿತರಣೆಗೆ ಸಮಯ ನಿಗದಿಪಡಿಸಲಾಗಿದೆ.

ಪೂರೈಕೆ ಸ್ಥಗಿತ: ಈ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆಗೆ ವಹಿಸಲಾಗಿದೆ. ಆದರೆ, ನಗರಸಭೆಯ ನಿರ್ಲಕ್ಷ್ಯ ಹಾಗೂ ನಗರವಾಸಿಗಳ ಬೇಜವಾಬ್ದಾರಿತನದಿಂದ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ಮತ್ತೆ ಕೆಲ ಘಟಕಗಳಿಗೆ ಟ್ಯಾಂಕರ್‌ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇನ್ನು ಕೆಲ ಘಟಕಗಳ ವಿದ್ಯುತ್ ಬಿಲ್‌ ಪಾವತಿಸದ ಕಾರಣ ಬೆಸ್ಕಾಂ ಸಿಬ್ಬಂದಿ ಅವುಗಳ ವಿದ್ಯುತ್‌ ಕಡಿತಗೊಳಿಸಿದ್ದಾರೆ.

ಹೀಗಾಗಿ ಹಲವು ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಸ್ಥಳೀಯರು ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದ್ದು, ಅನ್ಯ ಮಾರ್ಗವಿಲ್ಲದೆ ನೀರು ಖರೀದಿಸಿ ಕುಡಿಯುತ್ತಿದ್ದಾರೆ.

ಬಡ ಜನರು ನೀರು ಖರೀದಿಸಲಾಗದೆ ಸ್ಥಳೀಯ ಕೊಳವೆ ಬಾವಿಗಳಲ್ಲಿ ಸಿಗುವ ಅಥವಾ ನಗರಸಭೆಯು ಟ್ಯಾಂಕರ್‌ಗಳಲ್ಲಿ ಪೂರೈಸುವ ನೀರನ್ನೇ ಕುಡಿಯುವ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಕೆಲ ಬಡಾವಣೆಗಳ ನಿವಾಸಿಗಳು ಅಕ್ಕಪಕ್ಕದ ಬಡಾವಣೆಗಳಲ್ಲಿನ ಘಟಕಗಳಿಂದ ನೀರು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಶುದ್ಧ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದ್ದು, ಜನ ನೀರು ಪಡೆಯಲು ಘಟಕಗಳ ಬಳಿ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲು ವಂತಾಗಿದೆ.

ಫ್ಲೋರೈಡ್‌ ಅಂಶ: ನಗರದೊಳಗಿನ ಹಾಗೂ ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ 1,50 ಅಡಿಗಿಂತಲೂ ಆಳಕ್ಕೆ ಕುಸಿದಿದ್ದು, ಇಷ್ಟು ಆಳದಿಂದ ತೆಗೆದ ನೀರು ವಿಷಕಾರಿ ಫ್ಲೋರೈಡ್‌ ಅಂಶದಿಂದ ಕೊಡಿರುತ್ತದೆ. ಹೀಗಾಗಿ ಈ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ, ನಗರವಾಸಿಗಳು ಈ ನೀರನ್ನೇ ಬಳಸುತ್ತಿರುವುದರಿಂದ ವಿಷಕಾರಿ ಫ್ಲೋರೈಡ್‌ ಅಂಶ ದೇಹ ಸೇರುತ್ತಿದೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

₹ 4.12 ಕೋಟಿ ಮೀಸಲು
ನಗರದ ವಿವಿಧ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದಿವೆ. ಈ ಘಟಕಗಳನ್ನು ಶೀಘ್ರವೇ ರಿಪೇರಿ ಮಾಡಿಸುತ್ತೇವೆ. ಜತೆಗೆ ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) ನಗರದ ಪ್ರತಿ ವಾರ್ಡ್‌ನಲ್ಲೂ ಶುದ್ಧ ಕುಡಿಯುವ ನೀರು ಘಟಕ ಆರಂಭಿಸಲು ₹ 4.12 ಕೋಟಿ ಮೀಸಲಿಡಲಾಗಿದೆ.
–ಮಹಾಲಕ್ಷ್ಮಿ, ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT