ADVERTISEMENT

ರಸ್ತೆ ನಿರ್ಮಾಣ: ತಾರತಮ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 8:43 IST
Last Updated 2 ಸೆಪ್ಟೆಂಬರ್ 2017, 8:43 IST

ಮುಳಬಾಗಿಲು: ‘ನಗರಲ್ಲಿ ಎನ್‍ಎಚ್ 4 ಮತ್ತು 234 ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣದಲ್ಲಿ ಗುತ್ತಿಗೆದಾರರು ತಾರತಮ್ಯ ಮಾಡುತ್ತಿರುವುದು ಸರಿಯಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಎಚ್ಚರಿಕೆ ನೀಡಿದರು.

ಕಾಮಗಾರಿಯಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ ಕಿಸಾನ್ ಕೇತ್ ಮಜ್ದೂರ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಶಂಕರ ನಾರಾಯಣಗೌಡ ಅವರ ದೂರಿನ ಪ್ರಯುಕ್ತ ಶುಕ್ರವಾರ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲಿಸಿ ಮಾತನಾಡಿದರು.

‘ಇತ್ತೀಚೆಗೆ ಸರ್ಕಾರ ₹ 100ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಗೊಳಿಸಲು ಟೆಂಡರ್ ಕರೆದಿದೆ. ಆಂಧ್ರ ಪ್ರದೇಶದ ಮೂಲದವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಮೊದಲಿನ ರಸ್ತೆಗಿಂತ ಬಹಳ ಕಡಿಮೆಯಾಗಿ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಸುತ್ತಿದ್ದು ಜನರಿಗೆ ಅಸಮಾಧಾನ ತರಿಸಿದೆ’ ಎಂದರು.

ADVERTISEMENT

‘ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಹಣ ದುರುಪಯೋಗ ಪಡಿಸಿಕೊಳ್ಳಲು ಗುತ್ತಿಗೆದಾರರು ನಗರದಲ್ಲಿ ಮೂಲ ರಸ್ತೆಗಿಂತ ಕಡಿಮೆಯಾಗಿ ರಸ್ತೆ ವಿಸ್ತರಣೆಗೆ ಮುಂದಾಗಿರುವುದು ಖಂಡನೀಯ’ ಎಂದು ಶಂಕರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಈ ಬಗ್ಗೆ ಶಾಸಕರಿಗೆ, ನಗರಸಭೆ, ತಾಲ್ಲೂಕು ಆಡಳಿತಕ್ಕೂ ಮನವಿ ಸಲ್ಲಿಸಲಾಗಿದೆ. ಜನ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಬಿ.ಎನ್.ಪ್ರವೀಣ್, ಕರ್ನಾಟಕ ರೈತಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಚಲ್ಲಪಲ್ಲಿ ಎಂ.ಸಿ.ಕೃಷ್ಣಾರೆಡ್ಡಿ, ಜಗದೀಶ್ ಮಂಡಿಕಲ್, ತಾ.ಪಂ ಸದಸ್ಯ ಮಾರಪ್ಪ, ವಕೀಲ ಶ್ರೀರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.