ADVERTISEMENT

ರಸ್ತೆ ವಿಸ್ತರಣೆ; ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 7:16 IST
Last Updated 19 ಸೆಪ್ಟೆಂಬರ್ 2017, 7:16 IST

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ಭಾನುವಾರ ರಸ್ತೆ ವಿಸ್ತರಣೆಗೆ ಅಡಚಣೆಯಾಗಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಇಲ್ಲಿನ ರೈಲ್ವೆ ಗೇಟ್ ನಿಂದ ವೇಣುಗೋಪಾಲ ಸ್ವಾಮಿ ದೇಗುಲ ತಿರುವಿನವರೆಗೆ ಇದ್ದ ಅನಧಿಕೃತ ಕಟ್ಟಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು. ಲೋಕೋಪಯೋಗಿ ಇಲಾಖೆ ಸೂಚನೆಯಂತೆ ಪಂಚಾಯಿತಿ ಅಧ್ಯಕ್ಷ ಖಲೀಲ್ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ಎರಡು ದಶಕದಿಂದ ರಸ್ತೆ ಬಗ್ಗೆ ಇದ್ದ ಊಹಾಪೋಹಗಳಿಗೆ ಬೇಸತ್ತಿದ್ದ ಅಂಗಡಿ ಮಾಲೀಕರು, ತಾವಾಗಿಯೇ ಮುಂದೆ ಬಂದು ತೆರವು ಕಾರ್ಯಾಚರಣೆಗೆ ಸಹಕರಿಸಿದರು. ಶನಿವಾರ ಹಾಗೂ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಬಸ್ ನಿಲ್ದಾಣದಿಂದ ರೈಲ್ವೆ ಗೇಟ್ವರೆಗಿನ ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಬಸ್ ನಿಲ್ದಾಣದಿಂದ ವೇಣುಗೋಪಾಲ ಸ್ವಾಮಿ ದೇವಾಲಯದ ವರೆಗಿನ ಮಾರ್ಗದಲ್ಲಿ ಅಯ್ಯಪ್ಪಸ್ವಾಮಿ ದೇಗುಲ ಸೇರಿದಂತೆ ಹಲ ಕಟ್ಟಡಗಳ ತೆರವಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತೆರವು ಕಾರ್ಯಾಚರಣೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಶಾಹಿದ್, ತಾಪಂ ಸದಸ್ಯರಾದ ಜೆಸಿಬಿ ನಾರಾಯಣಪ್ಪ, ವೆಂಕಟೇಶಪ್ಪ, ಪಿಡಿಒ ಮೇಘ, ಗ್ರಾಪಂ ಸದಸ್ಯ ಆದಿನಾರಾಯಣ, ಮುಖಂಡರಾದ ರಂಗನಾಥ ನಾಯ್ಡು, ಡೈರಿ ಶ್ರೀನಿವಾಸ್ ಹಾಜರಿದ್ದರು.

ಮಾಲೀಕರ ಮನವಿ: ಲೋಕೋಪಯೋಗಿ ಇಲಾಖೆ ಅಂದಾಜಿಸಿರುವ 14 ಮೀ ರಸ್ತೆ ವಿಸ್ತರಣೆಯನ್ನು ರಸ್ತೆ ಎರಡೂ ಬದಿಗೆ ತಲಾ ಒಂದು ಮೀಟರ್ನಂತೆ ಕಡಿತ ಗೊಳಿಸಿ 12 ಮೀಟರ್ಗೆ ಕುಗ್ಗಿಸಬೇಕು ಎನ್ನುವುದು ಕಟ್ಟಡ ಮಾಲೀಕರು ಮನವಿ ಮಾಡಿದ್ದಾರೆ.

ಆದರೆ, ಈ ಹಿಂದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕನಿಷ್ಠ 14 ಮೀಟರ್‌ನಷ್ಟು ರಸ್ತೆ ವಿಸ್ತರಣೆಯಾಗಬೇಕು. ಅದಕ್ಕಿಂದ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.