ADVERTISEMENT

ರೈತರ ಸಮಸ್ಯೆ ಪರಿಹಾರಕ್ಕೆ ಕಾಳಜಿ ವಹಿಸಿ

ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:28 IST
Last Updated 16 ಫೆಬ್ರುವರಿ 2017, 10:28 IST
ಮುಳಬಾಗಿಲು: ‘ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ತಿಳಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ  ಮಾತನಾಡಿದರು. 
 
‘ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸಾಮಾನ್ಯ ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡಲು  ಸರ್ಕಾರಿ ನೌಕರರನ್ನು ನೇಮಿಸಿದೆ.  ಅಧಿಕಾರಿಗಳು ಕಾಳಜಿ ವಹಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಸೂಚಿಸಿದರು. 
 
‘ಬಹಳಷ್ಟು ದಿನಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಆದ್ದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಂದು ವಾರದದೊಳಗೆ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
 
ಸದಸ್ಯ ಸಿ.ವಿ.ಗೋಪಾಲ್ ಮಾತನಾಡಿ, ‘ತಾಲ್ಲೂಕಿನ 10 ಗ್ರಾಮಗಳಲ್ಲಿ ಅಂಬೇಡ್ಕರ್ ಸಮುದಾಯ ಭವನಕ್ಕೆ ₹1 ಕೋಟಿ ಹಣ ಬಿಡುಗಡೆಯಾಗಿದೆ. ಎರಡು ವರ್ಷ ಕಳೆದರೂ ಅಧಿಕಾರಿಗಳು ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿಲ್ಲ’ ಎಂದು ದೂರಿದರು.
 
‘ಕೆಲ ಶಾಲೆಗಳಲ್ಲಿ ಬಿಸಿಯೂಟದಲ್ಲಿ ತಾಜಾ ತರಕಾರಿ ನೀಡುತ್ತಿಲ್ಲ. ವಸತಿ ನಿಲಯಗಳಲ್ಲಿಯೂ ಗುಣಮಟ್ಟದ ಆಹಾರ ವಿತರಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.
 
ಸದಸ್ಯ ಆವಣಿ ರವಿಶಂಕರ್ ಮಾತನಾಡಿ, ‘ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಇಲಾಖೆಗಳಲ್ಲಿ ಆಯಾ ಇಲಾಖೆ ಅಧಿಕಾರಿಗಳು ಗುಂಪು ಕಟ್ಟಿಕೊಂಡು ಸರ್ಕಾರದ ಅನುದಾನ, ಯೋಜನೆ ಮತ್ತು ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ನಡೆವಳಿಕೆ ಸರಿಹೋಗದಿದ್ದರೆ ಪರಿಣಾಮಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.  
 
‘ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀಡುವ ಬೆಳೆಗಳನ್ನು ಅಲ್ಲಿನ ಅಡುಗೆ ಸಿಬ್ಬಂದಿ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ರಾಜಕೀಯ ಬಣ್ಣ ಕಟ್ಟುತ್ತಾರೆ. ಆದ್ದರಿಂದ ಅಧಿಕಾರಿಗಳು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಶಶಿಕಲಾ ನಾಗರಾಜ್ ಒತ್ತಾಯಿಸಿದರು.
 
ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇ ಶಪ್ಪ, ಉಪಾಧ್ಯಕ್ಷೆ ಟಿ.ಸುಜಾತ, ಸದಸ್ಯ ರಾದ ತೊರಡಿ ಹರೀಶ್, ನಂಗಲಿ ಕೆ.ಆರ್.ಶ್ರೀನಾಥ್, ಗಂಗಿರೆಡ್ಡಿ, ಮಾರಪ್ಪ, ಟಿ.ಬಾಲಕೃಷ್ಣ, ಪಿ.ಸುಬ್ಬಾರೆಡ್ಡಿ, ಭಾಗ್ಯಮ್ಮ ಮುನಿಸ್ವಾಮಿಗೌಡ, ಉಷಾರಾಣಿ, ಚಂದ್ರಮ್ಮ, ಎ.ವಿ.ಶ್ರೀನಿವಾಸ್, ಪಾರ್ವತಮ್ಮ, ನಾರಾಯಣಮ್ಮ, ಎ.ಎಸ್.ಮಹರ್ ಕಲ್ಯಾಣಿ, ಕೆ.ವಿ.ಅರುಣಾ, ಕೃಷಿ ಇಲಾಖೆ ಅಧಿಕಾರಿ ಶುಭಾ, ಸಿಡಿಪಿಒ ಶಂಕರ್‌ಮೂರ್ತಿ, ಮಂಜುನಾಥ್, ರೇಷ್ಮೆ ಇಲಾಖೆ ಅಧಿಕಾರಿ ವೆಂಕಟೇಶಪ್ಪ,  ಮಧುಸೂಧನ ರೆಡ್ಡಿ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.