ADVERTISEMENT

ವರಿಷ್ಠರ ತೀರ್ಮಾನವೇ ಅಂತಿಮ

ಜೆಡಿಎಸ್ ವಿವಿಧ ಘಟಕಗಳ ಪದಾಧಿಕಾರಿಗಳ ಸ್ಥಾನಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 4:48 IST
Last Updated 25 ಮೇ 2017, 4:48 IST

ಕೋಲಾರ: ‘ವರಿಷ್ಠರ ಸೂಚನೆ ಮೇರೆಗೆ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇ.ಗೋಪಾಲಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸ್ಥಾನಕ್ಕೆ ಕಾರ್ಯಕರ್ತರು ಸಲ್ಲಿಸಿದ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ‘ಪಕ್ಷದ ವೀಕ್ಷಕರು ಈಗಾಗಲೇ ತಾಲ್ಲೂಕುವಾರು ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವೀಕ್ಷಕರು ಪದಾಧಿಕಾರಿಗಳ ಪಟ್ಟಿಯನ್ನು ವರಿಷ್ಠರಿಗೆ ತಲುಪಿಸುತ್ತಾರೆ’ ಎಂದು ಹೇಳಿದರು.

‘ವೀಕ್ಷಕರು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವವರನ್ನು ಗುರುತಿಸಿ ಪದಾಧಿಕಾರಿಗಳಾಗಿ ನೇಮಕ ಮಾಡುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ನಡೆಯುವುದಿಲ್ಲ. ಪಕ್ಷ ಸಂಘಟನೆಯೇ ಪ್ರತಿಯೊಬ್ಬರ ಗುರಿಯಾಗಿರಬೇಕು’ ಎಂದು ಸಲಹೆ ನೀಡಿದರು.

‘ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಚ್.ಡಿ.ಕುಮಾರಸ್ವಾಮಿ ಪಣ ತೊಟ್ಟಿದ್ದು, ಅವರಿಗೆ ಕಾರ್ಯಕರ್ತರು ಕೈಜೋಡಿಸಬೇಕು. ಪಕ್ಷದಲ್ಲಿ 21 ಘಟಕಗಳಿದ್ದು, ಒಂದರಲ್ಲಿ ಸ್ಥಾನ ಸಿಗದಿದ್ದರೂ ಮತ್ತೊಂದು ಘಟಕದಲ್ಲಿ ಅವಕಾಶ ಸಿಗುತ್ತದೆ. ಆದ ಕಾರಣ ಯಾವುದೇ ಅಪಸ್ವರಕ್ಕೆ ಅವಕಾಶ ನೀಡದೆ ಪಕ್ಷ ಸಂಘಟನೆ ಮಾಡಿ’ ಎಂದು ಕಿವಿಮಾತು ಹೇಳಿದರು.

ದಿಕ್ಕು ತೋಚದಂತಾಗಿದೆ: ಪಕ್ಷದ ಮುಖಂಡ ಅಶೋಕ್ ಮಾತನಾಡಿ, ‘ಹೆಸರು ಅಥವಾ ಹುದ್ದೆಗಾಗಿ ಪಕ್ಷ ಸೇರಿ ನಾಯಕತ್ವ ಪಡೆದುಕೊಳ್ಳಬೇಕೆಂದಿದ್ದರೆ ಅಂತಹವರಿಗೆ ಅವಕಾಶವಿಲ್ಲ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ 10 ವರ್ಷದಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಇದರಿಂದ ಕಾರ್ಯ ಕರ್ತರಿಗೆ ದಿಕ್ಕು ತೋಚದಂತಾಗಿದೆ’ ಎಂದು ಹೇಳಿದರ.

‘ಸಂಘಟನೆಯ ಜವಾಬ್ದಾರಿ ಪಡೆಯು ವವರು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಕ್ಷದ ಕಾರ್ಯಕ್ರಮ, ಪ್ರತಿಭಟನೆಗಳಿಗೆ ತಪ್ಪಿಸಿಕೊಳ್ಳಬಾರದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳೀಧರರೆಡ್ಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದಯಾನಂದ್, ಪಕ್ಷದ ಸದಸ್ಯರಾದ ಲೋಕೇಶ್, ಚಂದ್ರಮೌಳಿ, ಪುಟ್ಟರಾಜು, ಹರೀಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.